ನ್ಯೂಸ್ ನಾಟೌಟ್: ಬಸ್ ನಲ್ಲಿ ಪ್ರಯಾಣಿಸುವಾಗ ಹಿಂದೂ ಯುವತಿಯ ಮೈ ಮುಟ್ಟಿದ ಎಂದು ಯುವಕರ ತಂಡವೊಂದು ಯುವಕನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಸುಳ್ಯದಿಂದ ವರದಿಯಾಗಿದೆ.
ಬೆಂಗಳೂರಿನಿಂದ ಸುಳ್ಯಕ್ಕೆ ಸುಬ್ರಹ್ಮಣ್ಯಕ್ಕಾಗಿ ಬರುತ್ತಿದ್ದ ಯುವಕ ಥಳಿತಕ್ಕೊಳಗಾಗಿ ಇದೀಗ ಸುಳ್ಯದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಿಂದ ನಿಯಾಝ್ ಎಂಬ 22 ವರ್ಷದ ಯುವಕ ಬಸ್ ನಲ್ಲಿ ತನ್ನ ಊರಿಗೆ ಪ್ರಯಾಣಿಸುತ್ತಿದ್ದ, ಈ ವೇಳೆ ಸುಬ್ರಹ್ಮಣ್ಯದ ಬಿಸಿಲೆ ಘಾಟ್ ಬಳಿ ಯುವತಿಯೊಬ್ಬಳು ಬಸ್ ಗೆ ಹತ್ತಿದ್ದಾಳೆ. ಈತನ ಪಕ್ಕದಲ್ಲಿದ್ದ ಸೀಟ್ ನಲ್ಲಿ ಕುಳಿತಿದ್ದಾಳೆ. ಈ ವೇಳೆ ಕಿಟಕಿ ಪಕ್ಕದಲ್ಲಿದ್ದ ಈತ ಕಿಟಕಿಯಿಂದ ಪಕ್ಕದ ಸೀಟಿಗೆ ಹೋಗುವುದಾಗಿ ಯುವತಿ ಬಳಿ ತಿಳಿಸಿದ್ದಾನೆ. ಆಕೆ ಕಿಟಕಿ ಸೀಟಿನಲ್ಲಿ ಕುಳಿತುಕೊಳ್ಳುತ್ತಾಳೆ, ಪಕ್ಕದ ಸೀಟಿಗೆ ಇವನು ಬರುತ್ತಾನೆ, ಪ್ರಯಾಣದ ಮಾರ್ಗ ಮಧ್ಯೆ ಯುವಕನ ಕೈ ಆಕೆಯ ಮೈಗೆ ತಾಗಿದೆ. ಇದನ್ನು ಆಕೆ ಪ್ರಶ್ನಿಸಿದ್ದಾಳೆ. ಒಂದಷ್ಟು ಗೊಂದಲ ಬಸ್ ನಲ್ಲಿ ಸೃಷ್ಟಿಯಾಗಿದೆ. ಆ ಬಳಿಕ ಆತ ಸುಳ್ಯದ ಪೈಚಾರ್ ಸಮೀಪ ಇಳಿದಾಗ ಕಾರ್ ನಲ್ಲಿ ಬಂದ ಅಪರಿಚಿತರ ತಂಡ ಆತನನ್ನು ಕಿಡ್ನ್ಯಾಪ್ ಮಾಡಿದೆ. ಸುಳ್ಯದ ಹಳೆ ಬಸ್ ನಿಲ್ದಾಣದ ಹಿಂದೆ ಕರೆದುಕೊಂಡು ಬಂದು ಹಲ್ಲೆ ನಡೆಸಿದೆ. ಮಾತ್ರವಲ್ಲ ಸುಳ್ಯ ಸರ್ಕಾರಿ ಬಸ್ ನಿಲ್ದಾಣದ ಹಿಂದೆಯೂ ಕರೆತಂದು ಹಿಗ್ಗಾಮುಗ್ಗಾ ಥಳಿಸಿದೆ. ಹೊಡೆತದ ಬಿಸಿಗೆ ಯುವಕ ಪ್ರಜ್ಞೆ ತಪ್ಪಿದ್ದಾನೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಪೊಲೀಸ್ ದೂರು ಇನ್ನಷ್ಟೇ ದಾಖಲಾಗಬೇಕಿದೆ ಎಂದು ತಿಳಿದು ಬಂದಿದೆ.