ನ್ಯೂಸ್ ನಾಟೌಟ್: ಕಳೆದ ಎರಡು ದಿನಗಳಿಂದ ಆಹಾರ ಸೇವಿಸದೆ ಸುಳ್ಯದ ಗಾಂಧಿನಗರದಲ್ಲಿ ದಿಕ್ಕು ತೋಚದೆ ಅಸ್ವಸ್ಥರಾಗಿ ಬಾಕಿಯಾಗಿದ್ದ ಅಜ್ಜಿಯೊಬ್ಬರನ್ನು ರಕ್ಷಿಸಿ ಅವರ ಮನೆಯವರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ತಲುಪಿಸುವ ಕಾರ್ಯವನ್ನು ಸುಳ್ಯದ ಪ್ರಗತಿ ಆ್ಯಂಬುಲೆನ್ಸ್ನ ಅಚ್ಚು, ಅಭಿಲಾಷ್ ಮತ್ತು ಗಾಂಧಿನಗರದ ಸ್ಥಳೀಯರು ಯಶಸ್ವಿಯಾಗಿ ಮಾಡಿದ್ದಾರೆ.
ಮಡಿಕೇರಿ ಗೋಣಿಕೊಪ್ಪ ಮೂಲದ ಬಾನು ಎಂದು ಹೆಸರಿನ ಅಜ್ಜಿಯೊಬ್ಬರು ಕಳೆದ ಮೂರು ದಿನಗಳ ಹಿಂದೆ ಸುಳ್ಯದಲ್ಲಿ ಬಸ್ಸಿನಿಂದ ಇಳಿದು ಬಾಕಿಯಾಗಿದ್ದರು. ಕನ್ನಡ ಅಲ್ಪ ಸ್ವಲ್ಪ ಬರುತ್ತಿದ್ದ ಈಕೆ ಹಿಂದಿ ಭಾಷೆ ಮಾಡುತ್ತಿದ್ದರು. ಸ್ಥಳೀಯರು ವಿಚಾರಿಸಿದಾಗ ಭಿಕ್ಷೆ ಬೇಡಲು ಬಂದಿರುವುದಾಗಿ ತಿಳಿಸಿದ್ದಾರೆ. ಆದರೆ ಇಂದು ಸಾಯಂಕಾಲ (ಸೆ.17) ವೃದ್ಧೆಯ ಆರೋಗ್ಯ ತೀರಾ ಹದೆಗೆಟ್ಟಿದ್ದು, ಇದನ್ನು ಗಮನಿಸಿ ಸ್ಥಳೀಯರಾದ ಪಾಣಂಗಡಿಯ ವಿಠಲ ಎಂಬವರು ಆಪತ್ಬಾಂಧವ ಅಚ್ಚು ಅವರಿಗೆ ಕರೆ ಮಾಡಿ ವೃದ್ಧೆಯ ಸಂಕಷ್ಟವನ್ನು ವಿವರಿಸಿದ್ದಾರೆ. ತಕ್ಷಣ ವೃದ್ಧೆಯ ನೆರವಿಗೆ ಬಂದ ಅಚ್ಚು, ಅಭಿಲಾಷ್ ಮತ್ತು ಗಾಂಧಿನಗರದ ಸ್ಥಳೀಯರು, ಆಕೆಯ ಮನೆಯವರನ್ನು ಪತ್ತೆ ಹಚ್ಚಲು ಸಾಕಷ್ಟು ಶ್ರಮಿಸಿದ್ದಾರೆ. ಅಚ್ಚು ಅವರು ತಮ್ಮೆಲ್ಲ ವಾಟ್ಸಾಪ್ ಗ್ರೂಪ್ ಮೂಲಕ ಅಜ್ಜಿಯ ಫೋಟೋವನ್ನು ಶೇರ್ ಮಾಡಿ ಕೊನೆಗೂ ಮನೆಯವರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಜ್ಜಿಯ ಮನೆಯವರಲ್ಲಿ ವಿಚಾರಿಸಿದಾಗ ಅಜ್ಜಿಯನ್ನು ಕಳೆದೆರಡು ದಿನಗಳಿಂದ ಹುಡುಕಾಟ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಅಜ್ಜಿಯ ತನ್ನ ಪುತ್ರಿಯ ಮನೆ ಕಾಸರಗೋಡಿನ ಕುಂಬಳೆಗೆ ಹೋಗಲು ಯಾರಲ್ಲೂ ಹೇಳದೆ ಹೊರಟಿದ್ದರು. ಆದರೆ ಕುಂಬಳೆ ಎಂದು ತಪ್ಪಾಗಿ ಸುಳ್ಯದಲ್ಲಿ ಇಳಿದಿದ್ದಾರೆ. ಮತ್ತೆ ಎಲ್ಲಿ ಹೋಗಬೇಕು ಎಂದು ಗೊತ್ತಾಗದೆ ಸುಳ್ಯದ ಗಾಂಧಿನಗರದಲ್ಲಿ ಬಾಕಿಯಾಗಿದ್ದರು. ಇದೀಗ ಸುಳ್ಯದ ಪ್ರಗತಿ ಆ್ಯಂಬುಲೆನ್ಸ್ನ ಅಚ್ಚು ಅವರು ಅಭಿಲಾಷ್ ಅವರ ಆಂಬುಲೆನ್ಸ್ ನಲ್ಲಿ ಅಜ್ಜಿಯನ್ನು ಗೋಣಿಕೊಪ್ಪಕ್ಕೆ ಕರೆದೊಯ್ಯುತ್ತಿದ್ದು, ದಾರಿ ತಪ್ಪಿ ಬಾಕಿಯಾಗಿದ್ದ ಅಜ್ಜಿಯನ್ನು ಇದೀಗ ಮನೆಯವರರೊಂದಿಗೆ ಸೇರಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಈ ಸಾಮಾಜಿಕ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ಸೂಚಿಸಿದ್ದಾರೆ.