ನ್ಯೂಸ್ ನಾಟೌಟ್ : ಪ್ರಾಕೃತಿಕ ವಿಪತ್ತಿನ ಸಂದರ್ಭದಲ್ಲಿ ತನ್ನ ಜೀವ ಲೆಕ್ಕಿಸದೆ ಅನೇಕ ಸವಾಲುಗಳಿಗೆ ಎದ್ದೆಯೊಡ್ಡಿದ ಹಾಗೂ ಅನೇಕ ಅನಾಹುತಗಳನ್ನು ತಪ್ಪಿಸಲು ನೆರವಾಗಿದ್ದ ಜನಮೆಚ್ಚಿದ ಸುಳ್ಯದ ಅಗ್ನಿಶಾಮಕ ಸಿಬ್ಬಂದಿ ಕಲ್ಲಪ್ಪ ಅವರು ದೂರದ ಬಾಗಲಕೋಟೆಗೆ ವರ್ಗಾವಣೆಗೊಂಡಿದ್ದಾರೆ.
ಬಾಗಲಕೋಟೆಯ ಬಿಳಗಿ ಠಾಣೆಯಲ್ಲಿ ಅವರು ಇದೀಗ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸುಳ್ಯದಲ್ಲಿ ಕಳೆದ 7 ವರ್ಷಗಳಿಂದ ಕೆಲಸ ನಿರ್ವಹಿಸಿದ್ದರು. ಕೊಡಗು ಭೂಕುಸಿತ, ಸಂಪಾಜೆ ಪ್ರವಾಹ, ಸುಬ್ರಹ್ಮಣ್ಯ ಪ್ರವಾಹ ಸೇರಿದಂತೆ ಅನೇಕ ಪ್ರಾಕೃತಿಕ ವಿಪತ್ತಿನ ಸಂದರ್ಭದಲ್ಲಿ ಅವರು ಸುಳ್ಯದ ಅಗ್ನಿಶಾಮಕ ಸಿಬ್ಬಂದಿಯಾಗಿ ದಿಟ್ಟವಾಗಿ ಕೆಲಸ ನಿರ್ವಹಿಸಿದ್ದನ್ನು ಸ್ಮರಿಸಬಹುದು. ತುರ್ತು ಸಂದರ್ಭದಲ್ಲಿ ನೇರವಾಗಿ ಅವರಿಗೆ ವೈಯಕ್ತಿಕ ಫೋನ್ ಕರೆ ಮಾಡಿದಾಗಲೂ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಇದೀಗ ಬಾಗಲಕೋಟೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಲ್ಲಪ್ಪ ಅವರು ಕೊಡಗು ದುರಂತದ ವೇಳೆ ಮದೆನಾಡು ಬಳಿ ಸಿಕ್ಕಿದ್ದ ಅನಾಥ ಶ್ವಾನವನ್ನು ರಕ್ಷಿಸುವಲ್ಲಿ ಇವರು ಕೂಡ ಪ್ರಮುಖ ಪಾತ್ರವಹಿಸಿದ್ದರು. ಸುಳ್ಯದಲ್ಲಿ ಕರ್ತವ್ಯ ತುಂಬಾ ವರ್ಷ ನಿಭಾಯಿಸಿದ್ದರಿಂದ ನಾನು ಊರಿನವರ ತರ ಆಗಿದ್ದೆ, ತುಳು ಕಲಿತಿದ್ದೆ ಎಂದು ಕಲ್ಲಪ್ಪ ನ್ಯೂಸ್ ನಾಟೌಟ್ ಜೊತೆ ತಿಳಿಸಿದ್ದಾರೆ.