ನ್ಯೂಸ್ ನಾಟೌಟ್: ಆಗ ತಾನೆ ನ್ಯೂಸ್ ಫಸ್ಟ್ ಕನ್ನಡ ವಾಹಿನಿಯ ‘Senior Correspondent’ ಹುದ್ದೆಗೆ ರಾಜೀನಾಮೆ ನೀಡಿ ಬೆಂಗಳೂರು ಬಿಟ್ಟು ಸಂಪಾಜೆಗೆ ಬಂದು ಕುಳಿತಿದ್ದೆ. ಇಷ್ಟು ವರ್ಷದಿಂದ ರಾಜ್ಯದ ಬೇರೆ..ಬೇರೆ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದೆ, ಕೈ ತುಂಬಾ ಸಂಬಳ ಸಿಗುತ್ತಿತ್ತು. ಆದರೆ ಅರೆಕಾಸಿನ ನೆಮ್ಮದಿ ಇರುತ್ತಿರಲಿಲ್ಲ, ಮುಂದೆ ನನ್ನದೇ ಆದ ಏನಾದರೂ ಆರಂಭಿಸಬೇಕು ಅಂತ ಯೋಚನೆ ಮಾಡುತ್ತಿದ್ದೆ. ನಮ್ಮಂಥವರನ್ನು ಯಾರೂ ಬೆಳೆಸುವುದಿಲ್ಲ, ನಮಗೆ ನಾವೇ ಬೆಳೆದುಕೊಳ್ಳಬೇಕು. ನನಗೆ ಬರೆಯುವ ಹುಚ್ಚು. ಹೊಟ್ಟೆಪಾಡಿಗಾಗಿ ಯಾವುದೋ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಅವರು ಹೇಳಿದ ಹಾಗೆಯೇ ಕೇಳಬೇಕು, ಹೇಳಿದ ಹಾಗೆಯೇ ಬರೆಯಬೇಕು, ಸ್ವಾತಂತ್ರ್ಯ ಅನ್ನೋದೇ ಇರೋದಿಲ್ಲ. ನನ್ನ ಬರೆಯುವ ಹುಚ್ಚನ್ನು ಮುಂದುವರಿಸಲು ನನ್ನದೇ ವೆಬ್ ಸೈಟ್ ಇದ್ದರೆ ಹೇಗೆ ಅನಿಸಿತು. ಆಗ ಹುಟ್ಟಿಕೊಂಡಿದ್ದೇ ಈ ‘ನ್ಯೂಸ್ ನಾಟೌಟ್’.
ದೇವರಿದ್ದಾನೆ ಅಂತ ‘ನ್ಯೂಸ್ ನಾಟೌಟ್’ ವೆಬ್ ಸೈಟ್ ಹಾಗೂ ಯೂಟ್ಯೂಬ್ ಚಾನೆಲ್ ಅನ್ನು ಮನೆಯಲ್ಲಿಯೇ ಕುಳಿತು 2021ರಲ್ಲಿ ಆರಂಭ ಮಾಡಿದೆ. ಈ ನಡುವೆ ಜೀವನ ಕೂಡ ಸಾಗಬೇಕು. ವೆಬ್ ಸೈಟ್ ನಲ್ಲಿ ನ್ಯೂಸ್ ಹಾಕಿದ ತಕ್ಷಣ ಏನು ಹಣ ಬರುತ್ತಾ..? ಖಂಡಿತ ಇಲ್ಲ. ಹಾಗೆನೆ ಒಂದು ದಿನ ಹೀಗೆ ಫೇಸ್ ಬುಕ್ ನೋಡುತ್ತಾ ಇದ್ದೆ. ಅಲ್ಲಿ ಒಂದು ಜಾಹೀರಾತು ಕಂಡೆ. ನಮ್ಮ ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾಗಿರುವ ಕನ್ನಡ ಮಾಧ್ಯಮ ಲೋಕದ ಎಲ್ಲರಿಗೂ ಪರಿಚಿತ ಪತ್ರಕರ್ತರಾಗಿ ಗುರುತಿಸಿಕೊಂಡಿರುವ ವಿಶ್ವೇಶ್ವರ್ ಭಟ್ ಅವರದ್ದು. ‘ಸುದ್ದಿ ಮನೆಯಲ್ಲಿ ಘಮಘಮಿಸುವ ಕಾಫಿ ಮಾಡುವ ಅನುಭವಿ, ಉತ್ಸಾಹಿ ಪತ್ರಕರ್ತರು ಬೇಕಾಗಿದ್ದಾರೆ’ ಎಂದು ಪೋಸ್ಟ್ ಹಾಕಿದ್ದರು. ಈ ಕೋವಿಡ್ ನಿಂದ (2021) ಹೇಗೂ ಮನೆಯಲ್ಲೇ ಇದ್ದೇನೆ. ವರ್ಕ್ ಫ್ರಮ್ ಹೋಮ್ ಸಿಗಬಹುದು ಅನ್ನುವ ಕಾರಣಕ್ಕೆ ಭಟ್ಟರ ಮೇಲ್ ಐಡಿಗೆ ಒಂದು ಅರ್ಜಿ ಸಲ್ಲಿಸಿದೆ. ಇದಾಗಿ ಮರುದಿನವೇ ನನಗೆ ಫೋನ್ ಬಂತು. ಸ್ವತಃ ವಿಶ್ವೇಶ್ವರ್ ಭಟ್ ಫೋನ್ ಮಾಡಿದ್ದರು. ‘ಹೇಮಂತ್ ನಿಮ್ಮ ಬೈಲೈನ್ ಸ್ಟೋರಿ ಎಲ್ಲ ನೋಡಿದ್ದೇವೆ. ಚೆನ್ನಾಗಿ ಬರಿತೀರಿ’ ಅಂದ್ರು.. ದಿಗ್ಗಜ ಪತ್ರಕರ್ತನ ಬಾಯಿಯಿಂದ ಆ ಮಾತು ಕೇಳಿ ಧನ್ಯೋಸ್ಮಿ ಅನಿಸಿತು. ಈ ವೇಳೆ ಕಾನ್ಫರೆನ್ಸ್ ಕಾಲ್ ನಲ್ಲಿ ವಸಂತ ನಾಡಿಗೇರ ಇದ್ದಾರೆ. ನಮ್ಮ ಸಹಾಯಕ ಸಂಪಾದಕರು, ಅವರು ಸ್ವಲ್ಪ ಮಾತನಾಡಬೇಕಂತೆ’ ಅಂತ ಭಟ್ಟರು ಹೇಳಿದ್ರು. ‘ಸರಿ ಸರ್’ ಅಂದೆ, ‘ಏನ್ರಿ ಸಂಪಾಜೆ ಹೇಗಿದ್ದೀರಾ..?’ ಅಂದ್ರು…’ಚೆನ್ನಾಗಿದ್ದೇನೆ ಸರ್’ ಅಂದೆ. ‘ವಿಶ್ವವಾಣಿಯ ರಾಷ್ಟ್ರೀಯ ಪುಟದ ಜವಾಬ್ದಾರಿ ತೆಗೋಬಹುದಾ..? ಫಾಸ್ಟ್ ಆಗಿ ಕೆಲಸ ಮಾಡಬೇಕಾಗುತ್ತೆ, ನಿಮಗೆ ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದ ಮಾಡಬಹುದೇ..?’ ಅಂತ ಕೇಳಿದ್ರು. ‘ಯಸ್’ ಅಂದೆ, ಮರುದಿನವೇ ಮನೆಯಿಂದಲೇ ಕೆಲಸ ಶುರುವಾಯಿತು. ಸುಮಾರು ಒಂದೂವರೇ ವರ್ಷ ನಾನು ಹಾಗೂ ವಸಂತ್ ನಾಡಿಗೇರ್ ಪ್ರತಿ ದಿನ ಝೋಮ್ ಮೀಟಿಂಗ್ ನಲ್ಲಿ ಭೇಟಿಯಾಗುತ್ತಿದ್ದೆವು. ಮುಖಪುಟಕ್ಕೆ ಹೋಗುವ ಸುದ್ದಿಗಳು ಹಾಗೂ ರಾಷ್ಟ್ರೀಯ ಪುಟದ ಸುದ್ದಿಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಕೆಲವು ಸಲ ನಾನು ಅವರೊಂದಿಗೆ ಸಿಟ್ಟು ಮಾಡಿಕೊಂಡಿದ್ದೂ ಉಂಟು. ದೊಡ್ಡ ಮನಸ್ಸಿನಿಂದ ಅವರು ಅದನ್ನು ಕ್ಷಮಿಸಿದ್ದೂ ಉಂಟು..ನ್ಯೂಸ್ ನಾಟೌಟ್ ಕಡೆಗೆ ಹೆಚ್ಚಿನ ಗಮನ ವಹಿಸಬೇಕಿದ್ದುದರಿಂದ ವಿಶ್ವವಾಣಿಗೆ ನಾನು ರಾಜೀನಾಮೆ ನೀಡಿದೆನು. ನನಗೂ ಮೊದಲೇ ಅವರೂ ರಾಜೀನಾಮೆ ನೀಡಿದ್ದರು. ಸಂಯುಕ್ತ ಕರ್ನಾಟಕ ಪತ್ರಿಕೆಗೆ ಅವರು ಸಂಪಾದಕರಾಗಿ ಆಯ್ಕೆಯಾಗಿದ್ದರು. ಇದಾಗಿ ಒಂದು ವರ್ಷ ಕಳೆದ ಬಳಿಕ ನಾನು ಅವರಿಗೆ ಮೊನ್ನೆ..ಮೊನ್ನೆಯಷ್ಟೇ ಕರೆ ಮಾಡಿದ್ದೆ. ‘ಸರ್ ನನ್ನದೊಂದು ನ್ಯೂಸ್ ಇದೆ ರಾಜ್ಯ ಪುಟದಲ್ಲಿ ಪ್ರಕಟಿಸಿ ಕೊಡಬಹುದೇ..?’ ಎಂದು ಕೇಳಿದ್ದೆ, ನನ್ನ ಅವರ ನಡುವಿನ ಕೋಪವನ್ನೆಲ್ಲ ಮರೆತು ಆ ಸುದ್ದಿಯನ್ನು ಸಂಯುಕ್ತ ಕರ್ನಾಟಕ ರಾಜ್ಯ ಪುಟದಲ್ಲಿ ಪ್ರಕಟಿಸಿಕೊಟ್ಟಿದ್ದರು. ಇಂದು ಬೆಳಗ್ಗೆ ನಮ್ಮ ಹಿರಿಯರ ಸಹೋದ್ಯೋಗಿ ಮಿತ್ರರಾದ ಹಾಗೂ ಖ್ಯಾತ ಸಿನಿಮಾ ಪತ್ರಕರ್ತರಾದ ಎ.ಆರ್. ಮಣಿಕಾಂತ್ ಸರ್ ಅವರು ‘ವಸಂತ ನಾಡಿಗೇರ’ ಇನ್ನಿಲ್ಲ ಅಂತ ಬರೆದದ್ದನ್ನು ಫೇಸ್ ಬುಕ್ ನಲ್ಲಿ ಕಂಡು ಶಾಕ್ ಆದೆ. ಭಗವಂತ ಇಷ್ಟು ಬೇಗ ನಮ್ಮಿಂದ ಅವರನ್ನು ದೂರ ಮಾಡಬಾರದಿತ್ತು… ನಾಡಿಗೇರರ ಆತ್ಮಕ್ಕೆ ಶಾಂತಿ ಸಿಗಲಿ.