ಸಿಎಂ ಕಚೇರಿಯ ಸಾಮಾಜಿಕ ಜಾಲತಾಣ ನಿರ್ವಹಣೆಗೆ ತಿಂಗಳಿಗೆ 54 ಲಕ್ಷ ರೂಪಾಯಿ ಖರ್ಚು..! ಈ ಹಿಂದಿನ ಮುಖ್ಯಮಂತ್ರಿಗಳು 2 ಕೋಟಿ ರೂ.ನಂತೆ ಖರ್ಚು ಮಾಡುತ್ತಿದ್ದರು ಎಂದ ಅಧಿಕಾರಿಗಳು..!

ನ್ಯೂಸ್‌ ನಾಟೌಟ್‌: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿ ಅಧಿಕೃತ ಮತ್ತು ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸಲು ತಿಂಗಳಿಗೆ ಸುಮಾರು 54 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತದೆ ಎಂಬುದು ಆರ್‌ಟಿಐಗೆ ಸಲ್ಲಿಸಿದ ಅರ್ಜಿಗೆ ಉತ್ತರ ದೊರೆತಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿರುವಾಗ ಮುಖ್ಯಮಂತ್ರಿ ಕಚೇರಿಯು ಇಷ್ಟೊಂದು ಮೊತ್ತದ ಹಣವನ್ನು ಕೇವಲ ಪ್ರಚಾರಕ್ಕೆ ಬಳಸಿಕೊಂಡಿರುವ ಬಗ್ಗೆ ಆರ್​ಟಿಐ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಣದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಸಾಮಾಜಿಕ ಮಾಧ್ಯಮ ಖಾತೆಗಳ ನಿರ್ವಹಣೆಗೆ ಭಾರಿ ವೆಚ್ಚ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಆರ್​ಟಿಐ ಅಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದೆ ಎಂದು ಆರ್‌ಟಿಐ ಕಾರ್ಯಕರ್ತ ಮಾರಲಿಂಗಗೌಡ ಮಾಲಿ ಪಾಟೀಲ್ ತಿಳಿಸಿದ್ದಾರೆ. ಆದರೆ, ಈ ಹಿಂದಿನ ಮುಖ್ಯಮಂತ್ರಿಗಳು ಮಾಡಿದ್ದ ಖರ್ಚಿಗೆ ಹೋಲಿಸಿದರೆ ಇದು ಕಡಿಮೆ ಎಂದು ಸಿಎಂಒ ಅಧಿಕಾರಿಗಳು ತಿಳಿಸಿದ್ದಾರೆ.ಹಿಂದಿನ ಮುಖ್ಯಮಂತ್ರಿಗಳು ತಿಂಗಳಿಗೆ 2 ಕೋಟಿ ರೂ.ನಂತೆ ಖರ್ಚು ಮಾಡುತ್ತಿದ್ದರು. ಅದಕ್ಕೆ ಹೋಲಿಸಿದರೆ ಈ ಮೊತ್ತ ತೀರಾ ಕಡಿಮೆ ಎಂದು ಸಿಎಂಒ ಅಧಿಕಾರಿಗಳು ಹೇಳಿದ್ದಾರೆ.