ನ್ಯೂಸ್ ನಾಟೌಟ್: ಕಳೆದ ಒಂದು ವಾರದಲ್ಲಿ ರೈಲು ಹಳಿ ತಪ್ಪಿಸುವ ಮೂರು ಪ್ರಯತ್ನಗಳು ಬೆಳಕಿಗೆ ಬಂದಿದ್ದು, ಇದರ ನಡುವೆ ರೈಲಿಗೆ ಕಲ್ಲೆಸೆದ ಎರಡು ಘಟನೆಗಳೂ ವರದಿಯಾಗಿವೆ. ಕಿಡಿಗೇಡಿಗಳು ಉದ್ದೇಶಪೂರ್ವವಾಗಿ ಈ ಕೃತ್ಯಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಕಾನ್ಪುರ ಬಳಿ ರೈಲು ಹಳಿಯ ಮೇಲೆ ಅಡುಗೆ ಅನಿಲ ಸಿಲಿಂಡರ್ ಇರಿಸಿದ ಘಟನೆ ನಡೆದಿದ್ದು, ಲೋಕೊ ಪೈಲಟ್ ತುರ್ತು ಬ್ರೇಕ್ ಅನ್ವಯಿಸಿದ್ದರಿಂದ ಅಪಘಾತ ಸಂಭವಿಸಿಲ್ಲ. ಇದರಿಂದಾಗಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ ಎಂದು ಇಲಾಖೆ ತಿಳಿಸಿದೆ. ಈ ಘಟನಾ ಸ್ಥಳದಲ್ಲಿ ಬೆಂಕಿಪೆಟ್ಟಿಗೆ ಮತ್ತು ಪೆಟ್ರೋಲ್ ಕೂಡಾ ಪತ್ತೆಯಾಗಿದೆ. ಇತ್ತೀಚೆಗೆ ಪಾಕಿಸ್ತಾನ ಮೂಲದ ಉಗ್ರನೊಬ್ಬ ಟೆಲಿಗ್ರಾಂನಲ್ಲಿ ವಿಡಿಯೊ ಬಿಡುಗಡೆ ಮಾಡಿ, ದೊಡ್ಡ ಪ್ರಮಾಣದ ರೈಲು ಹಳಿತಪ್ಪಿಸುವ ಪ್ರಯತ್ನಗಳನ್ನು ಮಾಡಿ ಎಂದು ಅನುಯಾಯಿಗಳನ್ನು ಕೋರಿದ್ದ ವಿಡಿಯೋ ವೈರಲ್ ಆಗಿತ್ತು.
ಕಳೆದ ವರ್ಷದ ಜೂನ್ ನಿಂದೀಚೆಗೆ ಕ್ರಾಸಿಂಗ್ ರೈಲಿನ ಮಧ್ಯ ಮರದ ತುಂಡುಗಳು, ರೈಲು ಹಳಿಯ ಮೇಲೆ ಕಲ್ಲು ಇಟ್ಟಿರುವ, ಸಿಗ್ನಲ್ ವಿರೂಪಗೊಳಿಸಿರುವ, ಹಳಿ ಮೇಲೆ ಸಿಲಿಂಡರ್ ಇಟ್ಟಿರುವ ಕನಿಷ್ಠ 17 ಪ್ರಕರಣಗಳನ್ನು ಲೋಕೊ ಪೈಲಟ್ ಗಳು ಪತ್ತೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಪ್ರಭಾವಿಗಳು ರೈಲು ಹಳಿಗಳನ್ನು ಅನಧಿಕೃತವಾಗಿ ಬಳಕೆ ಮಾಡಿಕೊಂಡಿರುವ ನಿದರ್ಶನಗಳೂ ಸಾಕಷ್ಟಿವೆ. ಕೆಲ ಪ್ರಕರಣಗಳಲ್ಲಿ ಬಾಲಾಪರಾಧಿಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದು ವರದಿ ತಿಳಿಸಿದೆ.
Click