ನ್ಯೂಸ್ ನಾಟೌಟ್: ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗಿ ಬಿಡುತ್ತೆ ಎಂಬ ಮಾತಿನಂತೆ ಪುಣೆಯಲ್ಲಿ ಐಷಾರಾಮಿ ಪೋರ್ಷೆ ಕಾರನ್ನು ವೇಗವಾಗಿ ಚಲಾಯಿಸಿ ಇಬ್ಬರನ್ನು ಬಲಿ ಪಡೆದ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಜಾಮೀನಿನ ಮೇಲೆ ಹೊರ ಬಂದ ಆರೋಪಿಗೆ ಇದೀಗ ಇನ್ನೊಂದು ಸಂಕಷ್ಟ ಎದುರಾಗಿದೆ. ಆತ ಮಾಡಿದ ಆ ಒಂದು ತಪ್ಪಿಗೆ ತನ್ನ ಶೈಕ್ಷಣಿಕೆ ಚಟುವಟಿಕೆ ಬುಡಮೇಲಾಗಿದೆ.
ಐಷಾರಾಮಿ ಕಾರನ್ನು ಮನಬಂದಂತೆ ಚಲಾಯಿಸಿ ಇಬ್ಬರು ಟೆಕ್ಕಿಗಳ ಸಾವಿಗೆ ಕಾರಣವಾದ ಅಪ್ರಾಪ್ತ ಬಾಲಕನ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ಮೊಕದ್ದಮೆಯಿಂದಾಗಿ ಆತನಿಗೆ ಯಾವುದೇ ಕಾಲೇಜಿನಲ್ಲಿ ಸೀಟು ಸಿಗುತ್ತಿಲ್ಲ, ಕಾಲೇಜಿನಲ್ಲಿ ಸೀಟು ಪಡೆಯಲು ಬಾಲಕ ಹೆಣಗಾಡುತ್ತಿದ್ದಾನೆ ಎಂದು ಆತನ ಪರ ವಕೀಲರು ಬಾಲ ನ್ಯಾಯ ಮಂಡಳಿಗೆ (ಜೆಜೆಬಿ) ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಪಿಯುಸಿ ಉತ್ತೀರ್ಣನಾದ ಅಪ್ರಾಪ್ತ ಆರೋಪಿಯು ದೆಹಲಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಬಿಎ ಕೋರ್ಸ್ಗೆ ಅರ್ಜಿ ಸಲ್ಲಿಸಿದ್ದ. ಆದರೆ ಇದರ ನಂತರ ನಡೆದ ಘಟನೆಯಿಂದ ಆತನ ಪ್ರವೇಶವನ್ನು ಕಾಲೇಜು ಆಡಳಿತ ಮಂಡಳಿ ನಿರಾಕರಿಸಿದೆ ಎಂದು ವಕೀಲರು ಹೇಳಿದ್ದಾರೆ. ಮೇ 19 ರ ಮುಂಜಾನೆ 17 ವರ್ಷದ ಬಾಲಕ ತನ್ನ ಪೋರ್ಷೆ ಕಾರನ್ನು ಮನಬಂದಂತೆ ಚಲಾಯಿಸಿ ಕಲ್ಯಾಣಿ ನಗರ ಪ್ರದೇಶದಲ್ಲಿ ಬೈಕ್ನಲ್ಲಿದ್ದ ಐಟಿ ಉದ್ಯೋಗಿಗಳಿಗೆ ಡಿಕ್ಕಿ ಹೊಡೆದು ಅವರ ಬೈಕ್ ನಲ್ಲಿದ್ದ ಇಬ್ಬರೂ ಮೃತಪಟ್ಟಿದ್ದರು. ಇದೀಗ ಅಪ್ರಾಪ್ತ ಬಾಲಕ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ.