ನ್ಯೂಸ್ ನಾಟೌಟ್ : ಸುಳ್ಯದ ನೆಹರೂ ಮೆಮೋರಿಯಲ್ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಜಂಟಿ ಆಶ್ರಯದಲ್ಲಿ ಓಣಂ ದಿನವನ್ನು ಸೆಪ್ಟಂಬರ್ 13ನೇ ಶುಕ್ರವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು. ಕಾಲೇಜಿನ ಮುಂಭಾಗವನ್ನು ಸಾಂಪ್ರದಾಯಿಕವಾಗಿ ಮಾವಿನ ತೋರಣ ಹಾಗೂ ತೆಂಗಿನ ಸಿರಿಯಿಂದ ಅಲಂಕರಿಸಲಾಗಿತ್ತು. ಆಗಮಿಸಿದ ಅತಿಥಿಗಳನ್ನು ಮಹಾಬಲಿ ಚಕ್ರವರ್ತಿ ಹಾಗೂ ವಾಮನ ವಟು ವೇಷಧಾರಿಗಳ ಜೊತೆ ಸಿಂಗಾರಿ ಮೇಳದ ಮೂಲಕ ಸ್ವಾಗತಿಸಲಾಯಿತು. ಬಳಿಕ ಕೆವಿಜಿ ಷಷ್ಠ್ಯಬ್ದ ರಂಗಮಂದಿರದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ನಿರ್ದೇಶಕಿ ಮೀನಾಕ್ಷಿ ಹೇಮನಾಥ ಕುರುಂಜಿ ಸಾಂಪ್ರದಾಯಿಕವಾಗಿ ತೆಂಗಿನ ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ವೇದಿಕೆಯಲ್ಲಿ ಅಕಾಡೆಮಿಯ ಕಾರ್ಯದರ್ಶಿ ಕೆ.ವಿ. ಹೇಮನಾಥ, ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು, ಪದವಿ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ, ಐಕ್ಯೂಎಸಿ ಸಂಯೋಜಕಿ ಡಾ. ಮಮತಾ ಕೆ, ಪದವಿ ಪೂರ್ವ ಪ್ರಾಂಶುಪಾಲೆ ಮಿಥಾಲಿ ಪಿ ರೈ ಹಾಗೂ ಎರಡೂ ವಿದ್ಯಾಸಂಸ್ಥೆಗಳ ಎಲ್ಲಾ ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ಬಳಿಕ ವೇದಿಕೆಯಲ್ಲಿ ಸಿಂಗಾರಿಮೇಳ ಪ್ರದರ್ಶನ ಹಾಗೂ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವೃಂದದವರಿಂದ ತಿರುವಾದಿರ ನೃತ್ಯ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಸಾಂಪ್ರದಾಯಿಕವಾಗಿ ಎಲ್ಲರೂ ನೆಲದಲ್ಲಿ ಕುಳಿತು ಬಾಳೆಯ ಎಲೆಯಲ್ಲಿ ಸಹಭೋಜನ ಮಾಡಿದ್ದು ವಿಶೇಷವಾಗಿತ್ತು. ನಂತರ ಓಣಂ ಪ್ರಯುಕ್ತ ಏರ್ಪಡಿಸಿದ ವಿವಿಧ ಆಟಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡರು. ಎಲ್ಲರೂ ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಮಿಂಚಿ ಸಂಭ್ರಮಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಕಾಲೇಜು ಸಾಂಸ್ಕೃತಿಕ ಸಂಘದ ವಿಷ್ಣು ಪ್ರಶಾಂತ್, ಹರಿಪ್ರಸಾದ್, ಕೃಪಾ ಹಾಗೂ ಇನ್ನಿತರ ಉಪನ್ಯಾಸಕರು ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ತರಗತಿ ಪ್ರತಿನಿಧಿಗಳು ಸಹಕರಿಸಿದರು.