ನ್ಯೂಸ್ ನಾಟೌಟ್ : ಈತನೊಬ್ಬ ಪಲ್ಲಂಗ ಪುರುಷ, ಒಂದು ರೀತಿಯಲ್ಲಿ ಉಂಡು ಹೋದ ಕೊಂಡು ಹೋದ ಸ್ವಭಾವದವನು, ಡೈವೋರ್ಸ್ ಆದ ಅಥವಾ ವಿಧವೆಯರೇ ಈತನ ಟಾರ್ಗೆಟ್ . ಅದರಲ್ಲೂ ಕ್ರಿಶ್ಚಿಯನ್ ಸುಂದರ ಮಹಿಳೆಯರೇ ಈತನಿಗೆ ಬೇಕು.
ಈತನ ಹೆಸರು ಮಥಾಯಿಸ್ ಅಂತ, ಉಡುಪಿ ಜಿಲ್ಲೆಯ ಕಾರ್ಕಳದವನು. ಈತ ಒಂಟಿಯಾಗಿರುವ ವಿಧವೆ ಅಥವಾ ಡೈವೋರ್ಸ್ ಆದ ಸುಂದರ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ, ಅವರ ಜೊತೆ ಪ್ರೀತಿಯ ನಾಟಕವಾಡುತ್ತಿದ್ದ, ಮದುವೆಯಾಗಿ ಬಳಿಕ ಅವರ ಜೊತೆಗೆ ಫಸ್ಟ್ ನೈಟ್ ಮಾಡಿಕೊಂಡು ಪಲ್ಲಂಗ ಸುಖವನ್ನು ಅನುಭವಿಸಿ ಅವರ ಚಿನ್ನಾಭರಣ ಕದ್ದು ಎಸ್ಕೇಪ್ ಆಗುತ್ತಿದ್ದ.
ಒಂದು ರೀತಿಯಲ್ಲಿ ಇವನದ್ದು ಉಪೇಂದ್ರನ ಬುದ್ಧಿವಂತ ಸಿನಿಮಾವನ್ನೇ ಹೋಲುವ ಶೈಲಿ. ನಾನವನಲ್ಲ..ನಾನವನಲ್ಲ ಅನ್ನುತ್ತಲೇ ಬುದ್ಧಿವಂತಿಕೆಯಿಂದ ಸುಂದರ ಮಹಿಳೆಯರನ್ನು ಬುಟ್ಟಿಗೆ ಹಾಕಿ ಶೀಲ ದೋಚಿ ಪರಾರಿಯಾಗುತ್ತಿದ್ದ ಪೋಲಿ ಕಾಮುಕ.
ಈತ ಕೊಲೆ ಪ್ರಕರಣದಲ್ಲಿಯೂ ಭಾಗಿಯಾಗಿರುವ ಖತರ್ನಾಕ್. 2019 ರಲ್ಲಿ ಪಕ್ಕದ ಮನೆಯಲ್ಲಿ ವಾಸವಿದ್ದ ನಿವೃತ್ತ ಪಿಡಿಒ ಭರತಲಕ್ಷ್ಮಿ ಎಂಬುವವರನ್ನು ಕೊಂದು ಅವರ ಮನೆಯಲ್ಲಿ ಚಿನ್ನಾಭರಣವನ್ನು ಲೂಟಿ ಮಾಡಿದ್ದ. ನಂತರ ಶವವನ್ನು ಬಾವಿಗೆ ಬಿಸಾಕಿದ್ದ. ಬಂಧನವಾಗಿ ಜಾಮೀನಿನ ಮೇಲೆ ಹೊರಬಂದು ಮುಂಬೈ ಸೇರಿಕೊಂಡಿದ್ದ.
ಈತನಿಂದ ಅನೇಕ ಮಹಿಳೆಯರು ಮೋಸ ಹೋಗಿದ್ದಾರೆ. ಮಾನ ಹಾಗೂ ಚಿನ್ನ ಕಳೆದುಕೊಂಡ ಮಹಿಳೆಯರು ಪೊಲೀಸರಿಗೆ ದೂರು ನೀಡುತ್ತಿರಲಿಲ್ಲ.ಮಂಗಳೂರು ಮತ್ತು ಉಡುಪಿಯ ನೂರಾರು ಮಹಿಳೆಯರಿಗೆ ಈತ ಇದೇ ರೀತಿ ವಂಚಿಸಿದ್ದ. ಮಂಗಳೂರಿನ ಕುಲಶೇಖರ ನಿವಾಸಿ ಮಹಿಳೆಗೆ 2021 ರಲ್ಲಿ ಇದೇ ರೀತಿ ವಂಚನೆ ಮಾಡಿದ್ದ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರಿಗೆ ಇತನನ್ನು ಹಿಡಿಯಲು ಇದುವರೆಗೆ ಸಾಧ್ಯವಾಗಿರಲಿಲ್ಲ. ಅದರಂತೆ ಮಂಗಳೂರಿನ ಅನಿತಾ ಎಂಬ ಶ್ರೀಮಂತ ಮಹಿಳೆ ಇಸ್ರೇಲ್ನಲ್ಲಿ ವಾಸವಾಗಿದ್ದರು. ಈಕೆಯನ್ನು ಬಲೆಗೆ ಬೀಳಿಸಿಕೊಂಡಿದ್ದ ರೋಹಿತ್ ಮಥಾಯೀಸ್, ಪ್ರೀತಿಯ ನಾಟಕವಾಡಿದ್ದ. ಬುದ್ಧಿವಂತನ ನಾಟಕಕ್ಕೆ ಫಿದಾ ಆಗಿದ್ದ ಅನಿತಾ ಇಸ್ರೇಲ್ ನಿಂದ ಮಂಗಳೂರಿಗೆ ಹಾರಿದ್ದರು.
ಬಳಿಕ ಈತನನ್ನು ಮದುವೆಯಾಗುವ ನಿರ್ಧಾರ ಮಾಡಿ,ತನ್ನ ಸ್ನೇಹಿತೆಯೊಬ್ಬಳಿಗೆ ತಿಳಿಸಿದ್ದರು. ಆದ್ರೆ, ಆ ಸ್ನೇಹಿತೆ ಕೂಡ ಈತನಿಂದ ಮೋಸ ಹೋದವಳಾಗಿದ್ದಳು. ಈತನಿಗೆ ಬುದ್ಧಿ ಕಲಿಸಬೇಕು ಎಂದು ಕಂಕನಾಡಿ ಪೊಲೀಸರಿಗೆ ವಿಚಾರ ತಿಳಿಸಿದರು. ಇವರಿಬ್ಬರು ಮಹಿಳೆಯರ ಜೊತೆ ಸೇರಿದ ಕಂಕನಾಡಿ ಪೊಲೀಸರು, ಮಥಾಯೀಸ್ಗೆ ನಮ್ಮ ಬಳಿ ಚಿನ್ನ ಇದೆ. ಮನೆಯಲ್ಲಿ ಸೇಫ್ ಆಗಿರಲ್ಲ. ಬ್ಯಾಂಕ್ಗೆ ಇಡಬೇಕು ಎಂದು ಮಥಾಯೀಸ್ಗೆ ಕೇಳಿದ್ದಾರೆ. ಮಥಾಯೀಸ್ ನಾನಿದ್ದೇನಲ್ಲ. ನನ್ನ ಬಳಿ ಕೊಡು ಸೇಫ್ ಆಗಿ ಇಟ್ಟುಕೊಂಡಿರುತ್ತೇನೆ ಎಂದು ಹೇಳಿದ್ದಾನೆ. ಅದಕ್ಕೆ ಅನಿತಾ ಅವರು ಒಕೆ ಅಂದ ಕೂಡಲೇ ಮುಂಬೈನಿಂದ ಮಂಗಳೂರಿಗೆ ಬಂದಿದಿಳಿದ್ದಾನೆ. ಬಂದ ಕೂಡಲೇ ಪೊಲೀಸರು ಬಂಧಿಸಿದ್ದಾರೆ.
ಇನ್ನು ಈತ ಭಾವನೆಗಳೇ ಇಲ್ಲದ ಮೃಗನಾಗಿದ್ದ. ಕಳೆದ 6 ತಿಂಗಳ ಹಿಂದೆ ತನ್ನ ತಾಯಿ ಮೃತಪಟ್ಟರು ಕೂಡ ಅವರ ಅಂತಿಮ ದರ್ಶನಕ್ಕೆ ಆಗಮಿಸಿರಲಿಲ್ಲ. ಸದ್ಯ ಏಳು ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.