ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮಕ್ಕಳ ದಾಖಲಾತಿ ಇಲ್ಲದೆ ಮುಚ್ಚುವ ಹಂತಕ್ಕೆ ಬಂದು ತಲುಪಿವೆ. ಇಂತಹ ಸಂದರ್ಭದಲ್ಲಿ ಸುಳ್ಯದ ಕೋಲ್ಚಾರಿನ ಸರ್ಕಾರಿ ಕನ್ನಡ ಶಾಲೆ ಅತ್ಯುತ್ತಮ ಕನ್ನಡ ಶಾಲೆ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡು ಸದ್ದು ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಾಥಮಿಕ ವಿಭಾಗದಲ್ಲಿ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೋಲ್ಚಾರು ಶಾಲೆಗೆ ರಾಜ್ಯ ಸರ್ಕಾರ ವತಿಯಿಂದ ಮಾಜಿ ಶಿಕ್ಷಣ ಸಚಿವ ದಿ. ಗೋವಿಂದೇ ಗೌಡರ ಹೆಸರಿನಲ್ಲಿ ನೀಡಲಾಗುವ 2024-25ನೇ ಸಾಲಿನ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಶಾಲೆಯ ಪರವಾಗಿ ಎಸ್ ಡಿಎಂಸಿ ಅಧ್ಯಕ್ಷ ಸುದರ್ಶನ ಪಾತಿಕಲ್ಲು ಮತ್ತು ಮುಖ್ಯ ಶಿಕ್ಷಕರಾಗಿರುವ ಶಿಕ್ಷಕ ಚಿನ್ನಸ್ವಾಮಿ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.
ಗುಣಮಟ್ಟದ ಶಿಕ್ಷಣ, ಪರಿಸರ ಸ್ವಚ್ಛತೆ, ಉತ್ತಮ ಗ್ರಂಥಾಲಯ, ಮಕ್ಕಳಲ್ಲಿ ಸೃಜನಾತ್ಮಕ ಚಟುವಟಿಕೆಗಳನ್ನು ರೂಪಿಸುವಲ್ಲಿ ಈ ಶಾಲೆ ಶ್ರಮಿಸಿರುವುದರಿಂದ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯ ಸಮಿತಿ ಆಯ್ಕೆ ಮಾಡಿಕೊಂಡಿತ್ತು.