ನ್ಯೂಸ್ ನಾಟೌಟ್: ಇಂದಿನ ದಿನಗಳಲ್ಲಿ ನಮ್ಮ ಜನಗಳಲ್ಲಿ ಮಾನವೀಯತೆ ಅನ್ನೋದೇ ಸತ್ತು ಹೋಗುತ್ತಿದೆ. ಪ್ರಾಣಿಗಳಿಂದ ಉಪಕಾರ ಪಡೆಯುವ ಮನುಷ್ಯ ಅದನ್ನು ಮರೆತು ಸ್ವಾರ್ಥಿಯಾಗುತ್ತಿರುವುದು ಸಾಕ್ಷಿ ಸಮೇತ ಹಲವು ಸಲ ನಿರೂಪಿತವಾಗಿದೆ. ಈ ಮಾತಿಗೆ ಅಪವಾದವೆಂಬಂತೆ ಇದೀಗ ಸುಳ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಕೊಡಗು ಭೂಕುಸಿತ ಪ್ರವಾಹದ ವೇಳೆ ಕರ್ತವ್ಯಕ್ಕೆ ಹೋಗಿದ್ದಾಗ ತಮಗೆ ಸಿಕ್ಕಿದ್ದ ಅನಾಥ ಶ್ವಾನವನ್ನು ಸಾಕಿ ಸಲಹಿ ಈಗ ವರ್ಗಾವಣೆ ವೇಳೆ ತನ್ನ ಜೊತೆಯೇ ದೂರದ ಯಲ್ಲಾಪುರಕ್ಕೆ ಕರೆದುಕೊಂಡು ಹೋಗಿದ್ದಾರೆ. ಮೂಕ ಪ್ರಾಣಿಯ ಜೊತೆಗಿನ ನಿಜವಾದ ಪ್ರೀತಿ ಅಂದರೆ ಇದೇ ಅಲ್ವಾ..?
ಕೊಡಗು ದುರಂತ ಸಂಭವಿಸಿದ ವೇಳೆ ಸುಳ್ಯದಿಂದ ಅಗ್ನಿಶಾಮಕ ಸಿಬ್ಬಂದಿ ಕರ್ತವ್ಯಕ್ಕೆಂದು ಮದೆನಾಡಿಗೆ ತೆರಳಿದ್ದರು. ಅಲ್ಲಿನ ಪರಿಸ್ಥಿತಿ ಯುದ್ಧಭೂಮಿಗಿಂತ ಕಡೆಯಾಗಿತ್ತು. ಮನುಷ್ಯನ ಜೀವನದ ಜೊತೆಗೆ ಪ್ರಾಣಿ ಸಂಕುಲವೂ ಅಂದಿನ ಭೀಕರ ದುರಂತಕ್ಕೆ ನಲುಗಿ ಹೋಗಿತ್ತು. ಈ ವೇಳೆ ಶ್ವಾನವೊಂದು ತನ್ನವರನ್ನು ಕಳೆದುಕೊಂಡು ಒಂಟಿಯಾಗಿ ಮೂಕರೋಧನೆ ಅನುಭವಿಸುತ್ತಿತ್ತು. ಇದನ್ನು ನೋಡಿ ಅದನ್ನು ಅಲ್ಲಿಯೇ ಬಿಟ್ಟು ಬರಲು ಮನಸ್ಸಾಗದೆ ಸುಳ್ಯದ ಅಗ್ನಿಶಾಮಕ ಪಡೆಯ ಅಧಿಕಾರಿ ಸುಧೀರ್ ಪಿ ಕಿಂದಲ್ಕರ್ ಹಾಗೂ ಸಿಬ್ಬಂದಿ ಅದನ್ನು ತಮ್ಮ ಜೊತೆ ಕರೆದುಕೊಂಡು ಸುಳ್ಯದ ಅಗ್ನಿಶಾಮಕ ಠಾಣೆಗೆ ಬಂದರು. ಹಾಗೆ ಬಂದ ಶ್ವಾನ ಬ್ಲ್ಯಾಕಿ ಎಂಬ ಹೆಸರಿನಲ್ಲಿ ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು.
ಹಗಲೆಲ್ಲ ಸೈಲೆಂಟ್ ಆಗಿರುತ್ತಿದ್ದ ಬ್ಲ್ಯಾಕಿ ರಾತ್ರಿಯ ಹೊತ್ತಿನಲ್ಲಿ ಅಗ್ನಿಶಾಮಕ ಕಟ್ಟಡವನ್ನು ಕಾಯುತ್ತಿತ್ತು. ಅಂತಹ ಶ್ವಾನವನ್ನು ಅನ್ನ ಆಹಾರ ನೀಡಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಸುಧೀರ್ ಪಿ ಕಿಂದಲ್ಕರ್ ಕೆಲವು ದಿನಗಳ ಹಿಂದೆ ಯಲ್ಲಾಪುರಕ್ಕೆ ಠಾಣಾಧಿಕಾರಿಯಾಗಿ ಪ್ರಮೋಷನ್ ಪಡೆದು ವರ್ಗಾವಣೆಗೊಂಡರು. ಈ ವೇಳೆ ಬ್ಲ್ಯಾಕಿಯನ್ನು ಬಿಟ್ಟು ಹೋಗುವುದಕ್ಕೆ ಅವರಿಗೆ ಮನಸ್ಸೇ ಬರುವುದಿಲ್ಲ. ತಕ್ಷಣ ಅವರು ಬ್ಲ್ಯಾಕಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗುವ ನಿರ್ಧಾರ ಮಾಡಿದರು. ಇದೀಗ ಬ್ಲ್ಯಾಕಿ ಯಲ್ಲಾಪುರದಲ್ಲಿ ಸುಧೀರ್ ಪಿ ಕಿಂದಲ್ಕರ್ ಜೊತೆ ಖುಷಿಯಾಗಿದೆ.
Click