ನ್ಯೂಸ್ ನಾಟೌಟ್: ರಾಜ್ಯ ಕರ್ನಾಟಕವೆಂದು ನಾಮಕರಣಗೊಂಡು 5 ದಶಕಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ “ಕರ್ನಾಟಕ ಸುವರ್ಣ ಸಂಭ್ರಮ ರಥ”ಯಾತ್ರೆಯನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸುಳ್ಯಕ್ಕೆ ಆಗಮಿಸಿದ ಕನ್ನಡ ರಥವನ್ನು ಸುಳ್ಯದ ಶಾಸ್ತ್ರೀ ವೃತ್ತದ ಬಳಿ ಇಂದು (ಸೆ.30) ಮಧ್ಯಾಹ್ನ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭ ಉಪಸ್ಥಿತರಿದ್ದ ಗಣ್ಯರು ತಾಯಿ ನಾಡದೇವಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿ ಅದ್ದೂರಿಯಾಗಿ ಸ್ವಾಗತಿಸಿದರು. ಈ ವೇಳೆ ಸುಳ್ಯ ತಹಶೀಲ್ದಾರ್ ಅರವಿಂದ್ ಕೆ.ಎಂ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್, ಕ್ಷೇತ್ರ ಶಿಕ್ಷಣಾಧಿಕಾರಿ ಯು.ಕೆ ಶೀತಲ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಪೇರಾಲು ಹಾಗೂ ಮತ್ತಿತರರು ಹಾರಾರ್ಪಣೆಗೈದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಕಸಾಪ ಪದಾಧಿಕಾರಿಗಳು. ಲಯನ್ಸ್, ರೋಟರಿ, ಜೇಸಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು, ಕನ್ನಡಾಭಿಮಾನಿಗಳು ಈ ಸಂದರ್ಭ ಉಪಸ್ಥಿತರಿದ್ದರು. ಶಾಸ್ತ್ರೀ ವೃತ್ತದಿಂದ ಗಾಂಧಿನಗರ ತನಕ ರಥ ಸಂಚರಿಸಿ ನಾಳೆ ಪುತ್ತೂರಿಗೆ ತೆರಳಲಿದೆ.