ನ್ಯೂಸ್ ನಾಟೌಟ್: ಪುಂಡರ ಗುಂಪೊಂದು ಢಾಬಾದಲ್ಲಿ ಊಟ ಮಾಡಿ ಹಣ ನೀಡದೇ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಬಿಲ್ ಕೇಳಿದ ಸಿಬ್ಬಂದಿಯನ್ನು ಬರೊಬ್ಬರಿ 1.ಕಿಮೀ ವರೆಗೂ ಕಾರಿನಲ್ಲಿ ಎಳೆದೊಯ್ದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಈ ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದ್ದು, ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮೆಹ್ಕರ್- ಪಂಢರಪುರ ಪಾಲ್ಖಿ ಹೆದ್ದಾರಿ ರಸ್ತೆಯ ಸಮೀಪದಲ್ಲಿರುವ ಢಾಬಾಕ್ಕೆ ಕಾರಿನಲ್ಲಿ ಬಂದ ಪುಂಡರ ಗುಂಪು ಹೊಟ್ಟೆ ತುಂಬಾ ಊಟ ಮಾಡಿದ್ದಾರೆ.
ಬಳಿಕ ಮೂವರು ಕಾರಿನೊಳಗೆ ಹತ್ತಿ ಕುಳಿತಿದ್ದು, ಈ ವೇಳೆ ಕಾರಿನ ಬಳಿ ಬಂದ ಸಿಬ್ಬಂದಿಗೆ ಯುಪಿಐ ಕೋಡ್ ತರುವಂತೆ ಹೇಳಿದ್ದಾರೆ. ಆತ ಕೋಡ್ ತರಲು ಹೋಗುತ್ತಲೇ ಕಾರನ್ನು ಚಾಲನೆ ಮಾಡಿಕೊಂಡು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ.
ಈ ವೇಳೆ ಎಚ್ಚೆತ್ತ ಸಿಬ್ಬಂದಿ ಕಾರಿನ ಹಿಂದೆ ಓಡಿ ಚಲಿಸುತ್ತಿದ್ದ ಕಾರಿನ ಬಾಗಿಲು ತೆರೆದು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಆಗಲೂ ಕಾರನ್ನು ನಿಲ್ಲಿಸದ ದುಷ್ಕರ್ಮಿಗಳು ಸುಮಾರು 1 ಕಿ.ಮೀ ದೂರ ಆತನನ್ನು ಹಾಗೆಯೇ ಎಳೆದುಕೊಂಡು ಹೋಗಿದ್ದು, ಅಲ್ಲಿಂದ ಆತನ ಕಣ್ಣಿಗೆ ಬಟ್ಟೆ ಕಟ್ಟಿ ಧಾರೂರು ತಾಲೂಕಿನ ಅಜ್ಞಾತ ಸ್ಥಳಕ್ಕೆ ಆತನನ್ನು ಕರೆದೊಯ್ದು ರಾತ್ರಿಯೆಲ್ಲಾ ಕಟ್ಟಿಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೆ ಆತನ ಜೇಬಿನಲ್ಲಿದ್ದ ಸುಮಾರು 11, 500 ರೂಗಳನ್ನು ಕಸಿದಿದ್ದು, ಬಳಿಕ ಬೆಳಗಿನ ಜಾವ ಆತನನ್ನು ಬಿಡುಗಡೆ ಮಾಡಿ ಕಳುಹಿಸಿದ್ದಾರೆ.
ಇನ್ನು ಢಾಬಾ ಬಳಿ ನಡೆದ ಘಟನೆಯ ಇಡೀ ದೃಶ್ಯಾವಳಿಗಳು ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇನ್ನು ಢಾಬಾ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ದಿಂಡ್ರೂಡ್ ಪೊಲೀಸರು ಸಖಾರಾಮ್ ಜನಾರ್ದನ್ ಮುಂಡೆ ಮತ್ತು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Click