ಹರೇರಾಮಹರೇಕೃಷ್ಣ …ವಂದೇ ಗೋಮಾತರಂ…. ಇತ್ತೀಚೆಗೆ ಸುಳ್ಯದ ಜಾಲ್ಸೂರು ಸಮೀಪದ ಒಂದು ದನ ಮತ್ತು ಅಜ್ಜಿ ಬಗ್ಗೆ ಮನಕಲಕುವ ವಿಡಿಯೋವನ್ನು ಸಮಾಜದ ಮುಂದೆ ತೆರೆದಿಟ್ಟವರು ಸುಳ್ಯದ ‘ನ್ಯೂಸ್ ನಾಟೌಟ್’ ಚಾನೆಲ್ ಹೇಮಂತ್ ಸಂಪಾಜೆ ಹಾಗೂ ಅವರ ತಂಡ. ಈ ಭಾರತೀ ಅಜ್ಜಿ ಯ ಜೊತೆ ಈ ಗೋವು ತುಂಬಾ ವರುಷಗಳಿಂದ ಜೊತೆಯಲ್ಲೇ ಇದ್ದು, ವಿಶೇಷವಾಗಿ ದೋಸೆ, ಕಾಫಿ, ಟೀ, ಸೇಮಿಗೆ ,ಕಿಂಚಿತ್ ಹುಲ್ಲು ತಿನ್ನುತ್ತಿತ್ತು. ಅಲ್ಲದೇ ದಿನಕ್ಕೆ ಒಂದೋ ಎರಡೋ ಬಾರಿಯಷ್ಟೇ ಸಗಣಿ ಹಾಗೂ ಮೂತ್ರ ಮಾಡಿ, ತನ್ನ ಜಾಗವನ್ನು ಸ್ವಚ್ಛಂದವಾಗಿರಿಸಿ ಅಜ್ಜಿಯ ಜೊತೆಯಲ್ಲಿಯೇ ಮಲಗಿ ದಿನಗಳೆಯುತ್ತಿದುದನ್ನು ಅವರ ವಿಡಿಯೋ ಮೂಲಕ ನಾವೆಲ್ಲರೂ ನೋಡಿರುತ್ತೇವೆ. ಈ ಅಜ್ಜಿ ದನವನ್ನು ಸಾಕಲು ಇವರಿಗೆ ಅದುವರೆಗೆ ಸಹಾಯವಿತ್ತವರು ಅದೆಷ್ಟೋ ಮಂದಿಯಂತೆ!!..ಅಜ್ಜಿಯ ಅಳಲು ಒಂದೊಂದಾಗಿ ಬಂದಾಗ ಸಮಾಜದ ಜನತೆ ಕಂಬನಿ ಮಿಡಿದು, ಕರುಣೆ ದಯೆ ಅನುಕಂಪದಿಂದ ತಮ್ಮ ತಮ್ಮ ಕೈಲಾದ ಮೊತ್ತವನ್ನು ನ್ಯೂಸ್ ನಾಟೌಟ್ ಚಾನೆಲ್ ಮೂಲಕ ಅಜ್ಜಿಗೆ ತಲುಪಿಸಿದರು.
ಅಷ್ಟು ಹೊತ್ತಿಗೆ ಅಜ್ಜಿಯ ಆರೋಗ್ಯವೂ ಕೆಟ್ಟಿತ್ತು. ಈ ದಯನೀಯ ಸ್ಥಿತಿಯನ್ನು ಕಂಡು ಊರವರು ಹಾಗೂ ಮುಖ್ಯವಾಗಿ ಜಾಲ್ಸೂರು ಪಂಚಾಯತ್ ಅಧ್ಯಕ್ಷೆ , ಆಶಾ ಕಾರ್ಯಕರ್ತೆಯರು,ಹಾಗೂ ಪಂಚಾಯತ್ ಸದಸ್ಯರು ಒಂದಷ್ಟು ಈ ಅಜ್ಜಿಯ ಮನೆಯವರ ಹಿನ್ನಲೆ ಸಂಗ್ರಹಿಸಿ ಅವರ ಗಂಡ ಹಾಗೂ ದೂರದಲ್ಲಿದ್ದ ಮಗನನ್ನು ಕರೆಯಿಸಿ ವಿಚಾರ ಮುಂದಿಟ್ಟರು. ತನ್ನ ಗಂಡನಿಂದ ಬೇರ್ಪಟ್ಟ ಅಜ್ಜಿಗೆ, ಈ ‘ನ್ಯೂಸ್ ನಾಟೌಟ್’ ಚಾನೆಲ್ ಸಹಾಯದಿಂದ ತನ್ನ ಮಗನ ಇರುವಿಕೆ ಹಾಗೂ ಅವರ ಜೊತೆಯಲ್ಲಿ ಆಶ್ರಯ ದೊರೆಯುವಂತಾಯಿತು..! ಈ ಮೂಲಕ ತಾಯಿ- ಮಗನ ಒಂದಾಗಿಸಿದ ‘ನ್ಯೂಸ್ ನಾಟೌಟ್’ ಗ್ರೇಟ್ ಕಣ್ರೀ..!
ಇತ್ತ ಅಜ್ಜಿಯನ್ನು ಮಗನು ಕರೆದುಕೊಂಡು ಹೋದರೆ ಸಾಕೆ…? ಅವರ ಮುಗ್ಧ ಜೀವ ಆ ದನವನ್ನು ಏನು ಮಾಡುವುದೆಂದು ಅಲ್ಲಿಯವರೆಲ್ಲ ನಿರ್ಧರಿಸಿದಾಗ ಸೇರಿಸಿದ್ದು ನಮ್ಮ ಶ್ರೀ ರಾಮಚಂದ್ರಾಪುರ ಮಠದ ಸುಳ್ಯ ಸಂಪಾಜೆಯ ಜೇಡ್ಲ ಗೋಶಾಲೆಗೆ!! ಯಬ್ಬಾ ಈಗಲಾದರೂ ಈ ಕಥೆಗೊಂದು ಪೂರ್ಣವಿರಾಮ ಹಾಕೋಣವೆಂದು ಚಾನೆಲ್ ನವರು ಇದ್ದರೆ ಇನ್ನಷ್ಟು ಸಮಸ್ಯೆ ಬಿಗಡಾಯಿಸಬೇಕೇ..!!!!
ಮೊದಲೇ ವಿಶೇಷ ಆಹಾರ ತಿಂದು ,ಏಕಾಂಗಿಯಾಗಿ ಅಜ್ಜಿಯ ಜೊತೆಯಲ್ಲೇ ಇದ್ದ ಹಸು, ಇತ್ತ ಮೂಕವೇದನೆ ,ವ್ಯಥೆಯಿಂದ ವಾರಗಳಷ್ಟು ದಿನ ಆಹಾರ ತಿನ್ನದೇ ಕೂರಬೇಕೇ..? ಗೋಶಾಲೆಯ ಸಿಬ್ಬಂದಿಯವರೆಲ್ಲಾ ಅವರವರ ಕರ್ತವ್ಯ, ಪ್ರೀತಿಯ ಧಾರೆಯನ್ನೆರೆದರೂಅಷ್ಟೇನು ಫಲಿಸಲಿಲ್ಲವಂತೆ ಮೊದಮೊದಲಿಗೆ, ಅಷ್ಟು ಹೊತ್ತಿಗೆ ಮತ್ತೆ ‘ನ್ಯೂಸ್ ನಾಟೌಟ್’ ತಂಡ ಗೋಶಾಲೆಗೆ ಬಂದು ಈ ದನ ಹೇಗಿದೆ..? ಎನ್ನುವ ಸ್ಥಿತಿಗತಿಗಳನ್ನು ಸಮಾಜಕ್ಕೆ ವಿಡಿಯೋ ಮೂಲಕ ಪ್ರಸಾರ ಮಾಡಿತು. ಇದನ್ನು ಕಂಡ ಜನತೆ ಮತ್ತೆ ಬೇಸರವ ವ್ಯಕ್ತಪಡಿಸಿದ್ದು, ಅಜ್ಜಿ ದನವ ಯಾಕೆ ಈ ಪರಿಸ್ಥಿತಿ ಗೆ ತಂದಿಟ್ಟಿರಿ..? ಎಂದು ಸಮಾಜ ಮಾತಾಡಿದಾಗ ಚಾನೆಲ್ ನವರೇನಾದರೂ ತಪ್ಪು ಮಾಡಿದೇವೆಯೇ..? ಎಂಬ ಪಶ್ಚಾತ್ತಾಪವೂ ಕಾಡತೊಡಗಿದ್ದನ್ನು ನಾವು ಅರಿತಿದ್ದೇವೆ.
ಈ ಎಲ್ಲಾ ಮಾಹಿತಿಗಳನ್ನು ನಾವು ದೂರದ ವಿಟ್ಲದಿಂದ ಗಮನಿಸುತ್ತಿದ್ದು.. ಇದಕ್ಕೇನಾದರೂ ಒಂದು ಸರಿಯಾದ ಮಾರ್ಗೋಪಾಯ ಮಾಡೋಣವೆಂದು ಗುರುರಾಮನಿಗೆ ನಮಿಸಿ ಕಾರ್ಯಕ್ಕೆ ಇಳಿದೆ! ಮೊದಲಿಗೆ ಚಾನೆಲ್ ವರೂ ಫೋನ್ ಗೆ ಸಿಗದಿದ್ದರೂ ಪ್ರಯತ್ನ ಕೆಡಲಿಲ್ಲ.. ಒಂದಷ್ಟು ಮಾಹಿತಿ ಸಿಕ್ಕಿದರೂ ಅದು ಸಾಲದು..ನಂತರ ನಾನು ವೈಯುಕ್ತಿಕ ವಾಗಿ ಮಾತಾಡಿದ್ದು ನಮ್ಮ ಆತ್ಮೀಯರು ,ವಕೀಲರು ಜಯಣ್ಣ ಕೊಡುಂಗೈ! ಅವರಿತ್ತ ನಂಬರಿಗೆ call ಮಾಡಿದಾಗ ಮೀನಗದ್ದೆ ಕೃಷ್ಣಣ್ಣ ಅರ್ಧಾಂಶ ಮಾಹಿತಿಯನಿತ್ತು..ಮುಖ್ಯವಾಗಿ ಜಾ. ಪಂಚಾಯತ್ ಅಧ್ಯಕ್ಷ ರ ನಂಬರಿತ್ತು ಸಹಕರಿಸಿದ್ದರು.
ನೋಡಿ ಅಕ್ಕಾ…ಗೋಶಾಲೆಯಲ್ಲಿ ದನಗಳ ನೋಡಿಗೊಳ್ಳಲು ಅದೆಷ್ಟು ಕಷ್ಟಗಳಿವೆಯೆಂದು ತಿಳಿದಿದೆಯಲ್ಲವೇ ಎಂಬ ಸೂಕ್ಷ್ಮ ಸಂಗತಿಯನ್ನು ಹೇಳಿದಾಗ, ನಮ್ಮ ಕೈಲಾದ ಪ್ರಯತ್ನಕ್ಕೆ ನಾವು ಹೊರಟಿರುವೆ…ಖಂಡಿತಾ ಕಾಯಿರಿ! ಎಂದು ಹೇಳಿ ಫೋನ್ ಇಟ್ಟೆ..!
ಆದಾಗ್ಯೂ ಪಂಚಾಯತ್ ಸದಸ್ಯರಾದ ಜಾಲ್ಸೂರು ಬಾಬಣ್ಣ ಈ ಅಜ್ಜಿ, ದನ ಅವರ ಕುಟುಂಬದ ಇಡೀ ಚಿತ್ರಣವನ್ನೇ ಇತ್ತಿದ್ದಲ್ಲದೇ ಇನ್ನಷ್ಟು ಸಂಪರ್ಕ ಸಂಖ್ಯೆಯ ಹೆಚ್ಚಿನ ಮಾಹಿತೆಗೆ ಕೊಟ್ಟು ಸಹಕರಿಸಿದರು. ಮತ್ತೆ ಅದೇ ರಾತ್ರಿಯಂದು ಚಾನೆಲ್ ಮುಖ್ಯಸ್ಥರಾದ ಹೇಮಂತಣ್ಣ ಅವರಿಗೆ ಮಾತಾಡಿದ ಬಳಿಕ ವಿಷಯ ಸ್ವಲ್ಪ ಪರಿವರ್ತಿತ ವಾದಂತೆ ಕಾಣುತ್ತದೆ ಮೇಡಂ ಅಂದ್ರು, ದೀರ್ಘ ಮಾತುಕತೆಯ ನಂತರ ಅವರಿಗೆ ನಿಮ್ಮ ಈ ಸಮಸ್ಯೆ ಬಗೆಹರಿಯದಿದ್ದರೆ ನಾವು ನಿಮ್ಮ ಜೊತೆ ಇದ್ದೇವೆ..ನಿಮ್ಮೆಲ್ಲರ ಅನುಮತಿಯಿದ್ದರೆ ಅಂದರೆ ಅಜ್ಜಿ ಹಾಗೂ ದನವನ್ನು ಒಂದು ದೇವಾಲಯದಂತ ಕಡೆ ಸೇರಿಸೋಣವೆಂಬ ಭರವಸೆಯನಿತ್ತಾಗ…..!!ಖಂಡಿತಾ ಎನ್ನುತ್ತಾ ತುಂಬಾ ಸಂತಸವ ವ್ಯಕ್ತಪಡಿಸಿದರು. ಆಗ ಅವರು ನಮ್ಮಲ್ಲಿ ಕೇಳಿಗೊಂಡಿದ್ದು, ನಾವು ಅಜ್ಜಿಯ ಬಗ್ಗೆ ಅವರ ಮಗನಮನೆಯಲ್ಲಿ ಹೇಗಿದ್ದಾರೆಂದು ಒಂದು ವಿಡಿಯೋ ಮಾಡಲು ಹೋಗುವವರಿದ್ದು ನೀವೂ ಬನ್ನಿ ಮೇಡಂ ಅಂದ್ರು, ಅಷ್ಟು ಹೊತ್ತಿಗೆ ನಾನಂತೂ ಊರಲ್ಲಿ ಇರಲ್ಲ ,ಅಶೋಕೆಯ ನಮ್ಮ ಮಠಕ್ಕೆ ಹೋಗುವವರಿದ್ದೇವೆ ಎಂದಾಗ…ಸರಿ..ನಿಮಗೆ ಮಾಹಿತಿ ಒದಗಿಸುತ್ತೇವೆಂದರು..!
ಇತ್ತ ನಾನೂ ಕೆಲಸದ ಒತ್ತಡದಲ್ಲಿದ್ದೆ, ಹಾಗೇ ಮೊನ್ನೆ ನ್ಯೂಸ್ ನಾಟೌಟ್ ಚಾನೆಲ್ ಮೇಲೆ ಕಣ್ಣಾಯಿಸಿ, ವೀಡಿಯೋ ಪೂರ್ತಿ ನೋಡಿದಾಗ ಆಗಿದ್ದು ಆನಂದ!! ಅಜ್ಜಿಯ ಈಗಿನ ಪೂರ್ತಿ ಮಾಹಿತಿ ಇರುವ ಚಿತ್ರಣವ ಹೇಮಂತ್ ಮತ್ತು ಅವರ ತಂಡ ಹಾಕಿದ್ದರು. ರಾಜ್ಯದ, ಗ್ರಾಮದ ಜನತೆಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.. ಕೂಡಾ, ಸಮಾಜದ ಜನತೆಯ ಮುಂದೆಯೇ ಅಜ್ಜಿಯ ಮಗನ ಮನೆಯಲ್ಲಿ ಸಂಗ್ರಹವಾದ ಒಂದಷ್ಟು ಹಣವನ್ನು ( ರೂ.17000) ವನ್ನು ಅಜ್ಜಿಗೆ ಒಪ್ಪಿಸಿ , ಉಳಿದ ಹಣವನ್ನು ಅಂದರೆ ( ರೂ. 10000) ವನ್ನು ಜೇಡ್ಲದ ಅಜ್ಜಿಯ ದನವಾದ ಕಾಮಧೇನುವಿನ ಸಲುವಾಗಿ ಗೋಶಾಲೆಯ ಮೇಲ್ವಿಚಾರಕರಿಗೆ ಹಸ್ತಾಂತರಿಸುವ ಮೂಲಕ ನಮಗೆ ಕೊಟ್ಟ ಮಾತನ್ನು ಹೇಮಂತ್ ಅವರು ಉಳಿಸಿ ಇಡೀ ಜನತೆಯ ಮುಂದೆ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಕಾರ್ಯವು ಸುಲಲಿತವಾಗಿ ನ್ಯೂಸ್ ನಾಟೌಟ್ ಮಾಡಿದೆ ಎಂದು ಇಂದು ನಿಮ್ಮೆಲ್ಲರ ಮುಂದೆ ನಾವು ಘೋಷಿಸುತ್ತೇವೆ. ಕಾಮಧೇನು ಗೋವಿಗೆ ಮುಂದೆ ಸಹಾಯದ ಅಗತ್ಯ ಬಂದರೆ ಚಾನೆಲ್ ಕಡೆಯಿಂದ ಮಾಡಲು ಸಿದ್ಧ ಅಂತ ಹೇಮಂತ್ ಅವರು ಹೇಳಿದ್ದು ಈ ಕಲಿಯುಗದಲ್ಲಿ ಬಹಳ ಅಪರೂಪದ ಮಾತು. ಅದೇನೇ ಇರಲಿ ಅತ್ತ ಅಜ್ಜಿ , ಇತ್ತ ಕಾಮಧೇನು ಇಬ್ಬರೂ ಇರುವಷ್ಟು ದಿನ ಸುಖವಾಗಿರಲಿ, ಇನ್ನುಳಿದ ಅವರಿಬ್ಬರ ಜೀವಿತಾವಧಿಯು ಆನಂದದಿಂದ ,ಆರೋಗ್ಯಯುತವಾಗಿರಲಿ ,ಕಾಮಧೇನುವು ಜೇಡ್ಲದಲ್ಲಿ ಎಲ್ಲಗೋವುಗಳ ಜೊತೆ ಬೆರೆತು ಹಾಯಾಗಿರಲೆಂದು ಪ್ರಾರ್ಥಿಸುತ್ತಾ, ಶ್ರೀ ಗುರುಗೋಮಾತೆಯರ ಆಶೀರ್ವಾದಾನುಗ್ರಹವು ಈ ವ್ಯವಸ್ಥೆ ಗೆ ಸಹಕರಿಸಿದವರೆಲ್ಲರ ಮೇಲಿರಲೆಂಬ ಪ್ರಾರ್ಥಿಸುತ್ತಾ. ಒಳ್ಳೆ ಕಾರ್ಯ ಮಾಡಿದಾಗ ಯಾರೆನ್ನೇ ಆದರೂ ಬೆಂಬಲಿಸೋಣ ಅವರನ್ನು ಪ್ರಶಂಸಿಸೋಣ ಈ ಮೂಲಕ ಇನ್ನಷ್ಟು ಒಳ್ಳೆಯ ಕಾರ್ಯಗಳು ಅವರ ಮೂಲಕ ಸಮಾಜಕ್ಕೆ ಸಿಗಲಿ, ಈ ಪ್ರಕಾರವಾಗಿ ಸಂಘಟಿತಾರಗೋಣ, ಇಂತಹ ಹಲವಾರು ಸಮಸ್ಯೆಗಳಿಗೆ ರಾಮಬಾಣದ ಸೇವೆಯ ಮಾಡುವ ಸುಳ್ಯ ನ್ಯೂಸ್ ನಾಟೌಟ್ ಚಾನೆಲ್ ಗೆ, ಅಜ್ಜಿ- ದನದ ಕಗ್ಗಂಟಿನಲ್ಲಿದ್ದ ತೊಂದರೆಗೆ ಸುಖಾಂತ್ಯಕ್ಕೆ ತರಲು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ, ವೈಯಕ್ತಿಕವಾಗಿ ನಮಗೂ ಈ ಹಾದಿಯಲ್ಲಿ ಮಾಹಿತಿಯನಿತ್ತು ಸಹಕರಿಸಿದವರಿಗೂ ಅನಂತಾನಂತ ಹೃತ್ಪೂರ್ವಕ ವಂದನೆಗಳು..
ಲೋಕಾಃ ಸಮಸ್ತಾ ಸುಖಿನೋ ಭವಂತು!!
ಸ್ವರ್ಣಗೌರಿ ಭಟ್ ಸಾಯ