ನ್ಯೂಸ್ ನಾಟೌಟ್: ಸುಳ್ಯ ನಗರ ಪಂಚಾಯತ್ ಹಲವಾರು ವರ್ಷಗಳಿಂದ ಸುಳ್ಯ ಪಟ್ಟಣದ ತ್ಯಾಜ್ಯ ವಸ್ತುಗಳನ್ನು ತಂದು ಘಟಕದಲ್ಲಿ ಶೇಖರಣೆ ಮಾಡಿ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದೆ ಇರುವುದು ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಸಿರಿಕುರಳ್ ನಗರದ ನಿವಾಸಿಗಳಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ಈ ಬಗ್ಗೆ ಸಿರಿಕುರಳ್ ನಗರದ ಪರಿಸರ ಹೋರಾಟ ಸಮಿತಿ ಮತ್ತು ಅಲ್ಲಿನ ನಿವಾಸಿಗಳು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದ್ದಾರೆ.
ಅಂತರ್ ರಾಜ್ಯ ಪ್ರಜಾಪ್ರಭುತ್ವ ಆಚರಣೆಯ ಅಂಗವಾಗಿ ಹಮ್ಮಿಕೊಂಡ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಧರಿಸಿ ಕಲ್ಚರ್ಪೆ ಸಿರಿಕುರಳ್ ಪರಿಸರದ ಜನರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಸಾಂಕ್ರಾಮಿಕ ರೋಗಗಳು ಮತ್ತು ದುರ್ವಾಸನೆಯಿಂದ ಪರಿಸರದ ಜನರಿಗೆ ಮತ್ತು ಮಕ್ಕಳಿಗೆ ವಾಸ ಮಾಡಲು ಕಷ್ಟಕರವಾದ ವಾತಾವರಣವನ್ನು ನಿರ್ಮಾಣವಾದ ಕಾರಣ ಹಲವಾರು ಬಾರಿ ಸಂಬಂಧ ಪಟ್ಟ ಇಲಾಖಾಧಿಕಾರಿಗಳಿಗೆ ಮತ್ತು ಜನಪ್ರತಿನಿದಿಗಳ ಗಮನಕ್ಕೂ ತಂದರೂ ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ಜನರು ಆರೋಪಿಸಿದ್ದಾರೆ.
ಅಲ್ಲಿನ ಪರಿಸರದಲ್ಲಿ ತುಂಬಿಸಿರುವ ಘನತ್ಯಾಜ್ಯವನ್ನು ವಿಲೇವಾರಿ ಮಾಡಿ ಈಗಿರುವ ತ್ಯಾಜ್ಯ ಘಟಕವನ್ನು ಸ್ಥಳಾಂತರಿಸಬೇಕು. ಪರಿಸರದಲ್ಲಿ ವಾಸವಾಗಿರುವ ಜನರ ಮತ್ತು ಮಕ್ಕಳ ಪ್ರಾಣಕ್ಕೆ ಅಪಾಯ ಬಾರದ ರೀತಿಯಲ್ಲಿ ಕ್ರಮಕೈಗೊಳ್ಳಬೇಕು. ಸಾಂಕ್ರಾಮಿಕ ರೋಗ ಬರದಂತೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸುಳ್ಯ ನಗರದ ಜನರಿಗೆ ಪೂಮಲೆಯಿಂದ ಹರಿದು ಬರುವ ನೀರಿನ ಜೊತೆಗೆ ತ್ಯಾಜ್ಯ ವಸ್ತುಗಳು ಮಿಶ್ರಣವಾಗಿ ಪಯಶ್ವಿನಿ ನದಿಗೆ ಸೇರುವುದರಿಂದ ಕುಡಿಯುವ ನೀರು ಮಲೀನವಾಗಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಈ ಎಲ್ಲಾ ಬೇಡಿಕೆಗಳ ಬಗ್ಗೆ ಸುಳ್ಯ ನಗರ ಪಂಚಾಯತ್ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.