ಕಡಬ: ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಆ್ಯಂಬುಲೆನ್ಸ್ ಪಲ್ಟಿ..! ರೋಗಿ ಸ್ಥಳದಲ್ಲೇ ಸಾವು, ಕುಟುಂಬಸ್ಥರಿಗೆ ಗಾಯ..!

ನ್ಯೂಸ್ ನಾಟೌಟ್ : ಪುತ್ತೂರಿನಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕರೆ ತರುತ್ತಿದ್ದ ಆ್ಯಂಬುಲೆನ್ಸ್ ಪಡೀಲು ಸಮೀಪ ಪಲ್ಟಿಯಾಗಿ ಗಂಭೀರ ಗಾಯಗೊಂಡ ರೋಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ(ಸೆ.25) ನಡೆದಿದೆ. ಕಡಬ ತಾಲೂಕಿನ ಹಳೆನೇರೆಂಕಿ ಗ್ರಾಮದ ರಾಮಜಾಲು ನಿವಾಸಿ ದಾಸಪ್ಪ ರೈ (73) ಮೃತರು ಎಂದು ಗುರುತಿಸಲಾಗಿದೆ.ಮೃತ ದಾಸಪ್ಪ ರೈ ಅವರ ಪತ್ನಿ ನಳಿನಿ ರೈ (54), ಪುತ್ರ ಹರ್ಷಿತ್ (33) ಹಾಗೂ ಸಂಬಂಧಿಕ ಯುವಕ ಮನೀಷ್ (24) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಹಳೆನೇರೆಂಕಿ ಗ್ರಾಮದ ಕದ್ರ ನಿವಾಸಿ ದಾಸಪ್ಪ ರೈಯವರಿಗೆ ಸೆ.24ರಂದು ತಡರಾತ್ರಿ 1:30ರ ವೇಳೆಗೆ ಸ್ಟ್ರೋಕ್ ಆಗಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರ ಮನೆ ಸಮೀಪದ ನಿವಾಸಿ, ರಮೇಶ್ ರೈ ಎಂಬವರು ತನ್ನ ಕಾರಿನಲ್ಲಿ ಪುತ್ತೂರಿನ ಆಸ್ಪತ್ರೆಗೆ ಕರೆ ತಂದಿದ್ದರು. ಅಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಾಸಪ್ಪ ರೈ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗಿತ್ತು. ಮುಂಜಾನೆ 4 ಗಂಟೆ ವೇಳೆಗೆ ಆಂಬುಲೆನ್ಸ್ ಫಸ್ಟ್ ನ್ಯೂರೋ ಆಸ್ಪತ್ರೆ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ವಿದ್ಯುತ್ ಕಂಬವೊಂದಕ್ಕೆ ಢಿಕ್ಕಿಯಾಗಿದೆ. ಅಸೌಖ್ಯದಿಂದ ಬಳಲುತ್ತಿದ್ದ ದಾಸಪ್ಪ ರೈ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಪಘಾತದಲ್ಲಿ ಆ್ಯಂಬುಲೆನ್ಸ್ ನಜ್ಜು ಗುಜ್ಜಾಗಿದ್ದು, ವಿದ್ಯುತ್ ಕಂಬ ಮುರಿದಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.