ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ, ಪೊಲೀಸರ ಮೇಲೂ ಬಿದ್ದ ಕಲ್ಲು..! ನಾಗಮಂಗಲದ ಬಳಿಕ ಮತ್ತೊಂದು ಹಿಂಸಾಚಾರ..!

ನ್ಯೂಸ್ ನಾಟೌಟ್: ಗಣೇಶ ಮೆರವಣಿಗೆ ನಡೆಯುವಾಗ ಕಲ್ಲು ತೂರಾಟ ನಡೆಸಿದ ಮತ್ತೊಂದು ಘಟನೆ ದಾವಣಗೆರೆಯ ಮುದ್ದ ಬೋವಿ ಕಾಲೋನಿ ಹಾಗೂ ವೆಂಕಬೋವಿ ಕಾಲೋನಿಯಲ್ಲಿ ನಿನ್ನೆ(ಸೆ.19) ರಾತ್ರಿ ನಡೆದಿದೆ. ನಗರದ ಅರಳಿ ಮರ ಸರ್ಕಲ್ ನಲ್ಲಿ ಮೆರವಣಿಗೆ ಸಾಗಿದ ನಂತರ ಅಜಾದ್ ನಗರ ಮುಖ್ಯ ರಸ್ತೆಯಿಂದ ಮೊದಲು ಕಲ್ಲು ತೂರಿದ್ದು ಇಬ್ಬರು ಪೊಲೀಸರು (Police) ಗಾಯಗೊಂಡಿದ್ದಾರೆ.ಕೂಡಲೇ ಮುಸ್ಲಿಂ ಮುಖಂಡರು ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದ್ದಾರೆ. ಗಣೇಶ ಮೆರವಣಿಗೆ ಸಾಗಿದ ಮೂರು ಕಡೆಗಳಲ್ಲಿ ಕಲ್ಲು ತೂರಾಟ ನಡೆಸಲಾಗಿದೆ. ಕೂಡಲೇ ಪೊಲೀಸರು ಇಡೀ ನಗರದಲ್ಲಿ ಸಂಚಾರ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಹಿಂದೂ ಮುಖಂಡರು ನಾಗಮಂಗಲ ಕಲ್ಲುತೂರಾಟ ಪ್ರಕರಣ ಹಾಗೂ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್‌ ಧ್ವಜ ಪ್ರದರ್ಶನ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು.ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಸಂಚಾಲಕ ಸತೀಶ್ ಪೂಜಾರ್ ವಿವಾದಾತ್ಮಕ ಹೇಳಿಕೆ‌ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಮುಸ್ಲಿಂ ಮುಖಂಡನೊಬ್ಬ ತಾಕತ್ ಇದ್ದರೆ ಬೇತೂರು ರಸ್ತೆಗೆ ಬಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇಂದು ಗಣೇಶ ಮೆರವಣಿಗೆಯಲ್ಲಿ ಸತೀಶ್ ಪೂಜಾರಿ ಭಾಗವಹಿಸಿದ್ದರು. ಮೆರವಣಿಗೆ ಸಾಗುವ ಅರಳಿಮರ ಸರ್ಕಲ್ ಬಳಿ ಭಾರೀ ಸಂಖ್ಯೆಯಲ್ಲಿ ಮುಸ್ಲಿಮರು ಸೇರಿದ್ದರು. ಗಣೇಶನ ಮೆರವಣಿಗೆ ಹೋಗುತ್ತಿದ್ದಾಗ ಇಸ್ಲಾಂ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.ಈ ವೇಳೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಮುಸ್ಲಿಂ ಮುಖಂಡರೇ ಜನಸಂದಣಿಯನ್ನು ನಿಯಂತ್ರಣ ಮಾಡಿದ್ದಾರೆ ಎನ್ನಲಾಗಿದೆ.