ಗಣಪತಿ ವಿಸರ್ಜನಾ ಮೆರವಣಿಯಲ್ಲಿ 3 ವಿದ್ಯಾರ್ಥಿಗಳಿಗೆ ಚಾಕು ಇರಿತ..! ನಾಗಮಂಗಲ ಕೋಮು ಗಲಭೆ ಬಳಿಕ ಮತ್ತೊಂದು ದುರಂತ..!

ನ್ಯೂಸ್‌ ನಾಟೌಟ್‌: ಬೆಳಗಾವಿಯಲ್ಲಿ ಐತಿಹಾಸಿಕ ಗಣೇಶೋತ್ಸವ ವಿಸರ್ಜನೆ ಮೆರವಣಿಗೆ ವೇಳೆ ಭೀಕರ ದುರಂತವೊಂದು ಸಂಭವಿಸಿದ್ದು, ಮಂಡ್ಯದ ನಾಗಮಂಗಲ ಕೋಮು ಗಲಭೆ ಬಳಿಕ ಇದೀಗ ಮತ್ತೊಂದು ಪ್ರಕರಣ ನಡೆದಿದೆ. ಬೆಳಗಾವಿ ನಗರದ ಚೆನ್ನಮ್ಮ ವೃತ್ತದ ಬಳಿ ಮೂವರು ಹಾಸ್ಟೆಲ್​ ವಿದ್ಯಾರ್ಥಿಗಳಿಗೆ (Students) ದುಷ್ಕರ್ಮಿಗಳು ಚಾಕು ಇರಿದಿದ್ದಾರೆ. ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವಾಗ ಕಾಲು ತಾಗಿದ್ದಕ್ಕೆ ಕಿರಿಕ್​ ಆಗಿದ್ದು ದುಷ್ಕರ್ಮಿಗಳು ವಿದ್ಯಾರ್ಥಿಗಳ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ. ಸಮಾಜ ಕಲ್ಯಾಣ ವಸತಿ ನಿಲಯದ ಮೂವರು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು ಹೊಟ್ಟೆ, ಕತ್ತು, ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದೆ. ಬೆಳಗಾವಿಯ ಚರ್ಚ್​ ಗಲ್ಲಿಯ ಯುವಕರ ಗ್ಯಾಂಗ್ ​ನಿಂದ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ. ಘಟನೆಯಲ್ಲಿ ಪ್ರವೀಣ್ ಗುಂಡ್ಯಾಗೋಳ್​ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಾಗೂ ದರ್ಶನ್​​ ಪಾಟೀಲ್​, ಸತೀಶ್​​ ಪೂಜಾರಿಗೆ ಬಿಮ್ಸ್ ​​ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಮತ್ತೊಂದೆಡೆ ಚಾಕು ಇರಿದು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಎಪಿಎಂಸಿ ಠಾಣೆ ಪೊಲೀಸರು ಬೆನ್ನತ್ತಿ ಚೇಸ್​ ಮಾಡಿ ಹಿಡಿದಿದ್ದಾರೆ. ಬೈಕ್​ನಲ್ಲಿ ಪರಾರಿಯಾಗುತ್ತಿದ್ದ ಮೂವರು ಆರೋಪಿಗಳು ವಿಶ್ವೇಶ್ವರಯ್ಯನಗರದಲ್ಲಿ ಸೆರೆಯಾಗಿದ್ದಾರೆ. ಸಿಪಿಐ ವಿಶ್ವನಾಥ್ ಕಬ್ಬೂರ ಮತ್ತು ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಗಾಂಜಾ ಮತ್ತಿನಲ್ಲಿ ಚಾಕು ಇರಿದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ವಶಕ್ಕೆ ಪಡೆದ ಆರೋಪಿಗಳ ವಿಚಾರಣೆ ನಡೆಯುತ್ತಿದೆ.