ಗಣೇಶ ಮೆರವಣಿಗೆ ವೇಳೆ ಹಿಂಸಾಚಾರ ಪ್ರಕರಣ ಸಂಬಂಧ 46 ಮಂದಿ ಬಂಧನ..! ಪ್ರಕರಣದ ಬಗ್ಗೆ ಉಡಾಫೆಯಾಗಿ ಉತ್ತರಿಸಿದ ಗೃಹ ಸಚಿವರು..!

ನ್ಯೂಸ್ ನಾಟೌಟ್: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕೋಮುಗಲಭೆ ಉಂಟಾಗಿ, ನಲುಗಿ ಹೋಗಿರುವ ನಾಗಮಂಗಲದಲ್ಲಿ ಪ್ರಸ್ತುತದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪ್ರಕರಣ ಸಂಬಂಧ ಈ ವರೆಗೂ 46 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಗೃಹ ಸಚಿವರು ಹಗುರವಾಗಿ ಮಾತನಾಡಿದ್ದು, ಗಣೇಶ ಮೂರ್ತಿ ವಿಸರ್ಜನೆಯ ವೇಳೆ ಆಕಸ್ಮಿಕವಾಗಿ ಕಲ್ಲು ತೂರಾಟ ನಡೆದಿದೆ. ಇದು ಸಣ್ಣ ಘಟನೆಯಾಗಿದ್ದು ಕೋಮು ಗಲಭೆ ಎಂದು ಹೇಳುವುದು ತಪ್ಪಾಗುತ್ತದೆ ಎಂದರು. ನಾಗಮಂಗಲದಲ್ಲಿ ನಿನ್ನೆ ಘಟನೆ ನಡೆಯಬಾರದಿತ್ತು. ಸಣ್ಣ ಪ್ರಮಾಣದಲ್ಲಿ ಆಗಿ ಮುಗಿದಿದ್ದು, ಯಾರೂ ಗಾಯಗೊಂಡಿಲ್ಲ. ಆಕಸ್ಮಿಕವಾಗಿ ಅಲ್ಲಿ ಹೋಗುವಾಗ ಕಲ್ಲು ಹಾಕಿದ್ದಾರೆ. ಈ ಪ್ರಕರಣಕ್ಕೆ ಜಾಸ್ತಿ ಪ್ರಚಾರ ನೀಡುವುದು ಬೇಡ ಎಂದು ಹೇಳಿದರು. ಸಚಿವ ಚೆಲುವರಾಯಸ್ವಾಮಿಯವರು ಈ ಬಗ್ಗೆ ಮಾತನಾಡಿ, ನಮ್ಮ ನಾಗಮಂಗಲ ಶಾಂತಿ, ಸೌಹಾರ್ದತೆಯ ನೆಲೆ. ಇಲ್ಲಿ ಅಶಾಂತಿ ಮೂಡಿಸುವ ಯಾವುದೇ ಪ್ರಯತ್ನವನ್ನು ನಾವು ಸಹಿಸುವುದಿಲ್ಲ. ತಪ್ಪು ಮಾಡಿರುವವರ ವಿರುದ್ಧ ಕ್ರಮ ಆಗುತ್ತದೆ. ಸಾರ್ವಜನಿಕರು ಯಾವುದೇ ವದಂತಿ ಪ್ರೇರಣೆಗಳಿಗೆ ಕಿವಿಗೊಡದೆ ಶಾಂತಿ ಮರುಸ್ಥಾಪನೆಗೆ ಸಹಕರಿಸಬೇಕೆಂದು ಕೋರುತ್ತೇನೆ ಎಂದಿದ್ದಾರೆ. ಪರಿಸ್ಥಿತಿ ಈಗ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ. ಸೆಕ್ಷನ್‌ 144 ಕೂಡ ಜಾರಿಯಲ್ಲಿದೆ. ಯಾವುದೇ ಆಸ್ತಿ ನಷ್ಟ, ಪ್ರಾಣಹಾನಿಯಾಗದಂತೆ ನೋಡಿಕೊಳ್ಳಿ. ಪರಿಸ್ಥಿತಿ ನಿಯಂತ್ರಣಕ್ಕೆ ಸೂಚನೆ ಕೊಟ್ಟಿದ್ದೇವೆ. ಆ ಕೆಲಸ ಆಗುತ್ತಿದೆ ಎಂದು ತಿಳಿಸಿದರು. Click