ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಸೋಷಿಯಲ್ ಮೀಡಿಯಾದಲ್ಲೇ ಬೆದರಿಕೆ ಹಾಕುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಇಂತಹ ಘಟನೆಗಳಿಗೆ ಹೆಣ್ಣು ಮಕ್ಕಳು ಪ್ರತಿಕ್ರಿಯಿಸುವುದು ತೀರ ಕಡಿಮೆ ಆಗಿದೆ. ಆದರೆ ಇಲ್ಲೊಬ್ಬಳು ಹೆಣ್ಣು ಮಗಳು ಅತ್ಯಾಚಾರದ ಬೆದರಿಕೆ ಹಾಕಿದ ಪುಂಡನನ್ನು ಹುಡುಕಿಕೊಂಡು ಹೋಗಿ ಚೆನ್ನಾಗಿ ಥಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದೆ.
ವ್ಯಕ್ತಿಯೊಬ್ಬ ಕಾಂಗ್ರೆಸ್ ನಾಯಕಿ ರೋಶ್ನಿ ಕುಶಾಲ್ ಜೈಸ್ವಾಲ್ ಎಂಬುವವರಿಗೆ ಫೇಸ್ ಬುಕ್ ನಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಲ್ಲದೆ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಸಿಟ್ಟಿಗೆದ್ದ ಕೈ ನಾಯಕಿ ರೋಶ್ನಿ ತನ್ನ ಬೆಂಬಲಿಗರೊಂದಿಗೆ ಆ ಪುಂಡನ ಮನೆಗೆ ನುಗ್ಗಿ ಹೆಂಡತಿ ಮಕ್ಕಳ ಎದುರೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯ ನಾಥ್ ಅವರನ್ನು ಒತ್ತಾಯಿಸಿದ್ದಾರೆ. ಅಲ್ಲದೆ ನನ್ನ ಪತಿಯ ಮೇಲೆ ಈಕೆ ಕಾರಣವಿಲ್ಲದೆ ಕೈ ಮಾಡಿದ್ದಾಳೆ ಎಂದು ರಾಜೇಶ್ ಪತ್ನಿಯೂ ಕೂಡಾ ರೋಶ್ನಿ ವಿರುದ್ಧ ದೂರನ್ನು ನೀಡಿದ್ದಾರೆ.
ಈ ಕುರಿತ ವಿಡಿಯೋವನ್ನು ಸಮರ್ ರಾಜ್ (SamarRaj_) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕೈ ನಾಯಕಿ ರೋಶ್ನಿ ತನ್ನ ಬೆಂಬಲಿಗರೊಂದಿಗೆ ಅತ್ಯಾಚಾರ ಬೆದರಿಕೆ ಹಾಕಿದಾತನ ಮನೆಗೆ ನುಗ್ಗಿ, ಆತನನ್ನು ಬೀದಿಗೆ ಎಳೆದು ತಂದು ಸಾರ್ವಜನಿಕರ ಎದುರಲ್ಲಿಯೇ ಹಿಗ್ಗಾಮುಗ್ಗಾ ಥಳಿಸುವ ದೃಶ್ಯವನ್ನು ಕಾಣಬಹುದು.
ಸೆಪ್ಟೆಂಬರ್ 15 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆತ ಅತ್ಯಾಚಾರ ಬೆದರಿಕೆ ಹಾಕಿದ್ದರೆ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡುವ ಬದಲು ನೀವ್ಯಾಕೆ ಕಾನೂನನ್ನು ಕೈಗೆ ತೆಗೆದುಕೊಂಡ್ರಿʼ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆತ ಮಾಡಿದ್ದು ತಪ್ಪೇ, ಆದ್ರೆ ಆತನ ಮೇಲೆ ಈಕೆ ಕೈ ಮಾಡಿದ್ದು ಸರಿಯೇʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಉತ್ತಮ ಕೆಲಸʼ ಎಂದು ಹೇಳಿದ್ದಾರೆ.