ಎತ್ತಿನಹೊಳೆ ಯೋಜನೆ ಲೋಕಾರ್ಪಣೆಗೆ ಸಿಎಂ ಜೊತೆ ಹೊರಟ ವಾರ್ತಾ ಇಲಾಖೆಯ ವಾಹನದ ಬ್ರೇಕ್ ಫೇಲ್..! ಪತ್ರಕರ್ತರ ವಾಹನ ಲಾರಿಗೆ ಡಿಕ್ಕಿ..!

ನ್ಯೂಸ್ ನಾಟೌಟ್: ಎತ್ತಿನಹೊಳೆ ಯೋಜನೆಯ ಮೊದಲ ಹಂತ ಲೋಕಾರ್ಪಣೆ ಸಂಬಂಧ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡನಗರ ಗ್ರಾಮದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ವಾರ್ತಾ ಇಲಾಖೆಯ ಮೂಲಕ ಪತ್ರಕರ್ತರನ್ನು ಕಳುಹಿಸಿದ ವಾಹನ ಬ್ರೇಕ್ ಫೇಲ್ ಆಗಿರುವ ಘಟನೆ ನಡೆದಿದೆ. ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಪತ್ರಕರ್ತರು ತೆರಳುತ್ತಿದ್ದ ವಾಹನ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿ ಚಲಿಸುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಬ್ರೇಕ್​ ಫೇಲ್ಯೂರ್​ ಕಾರಣ ವಾಹನ ಲಾರಿಗೆ ಡಿಕ್ಕಿಯಾಗಿರುವುದು ತಿಳಿದುಬಂದಿದೆ. ಅಪಘಾತದಲ್ಲಿ ಏಳು ಮಂದಿ ಪತ್ರಕರ್ತರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು(ಸೆ.6) ಎತ್ತಿನಹೊಳೆ ಯೋಜನೆಯ ಮೊದಲ ಹಂತ ಲೋಕಾರ್ಪಣೆಗೊಳ್ಳಲಿದೆ. ದೊಡ್ಡನಗರದ ವಿತರಣಾ ತೊಟ್ಟಿ 3ರಲ್ಲಿ ಎತ್ತಿನಹೊಳೆ ಯೋಜನೆಯ ಮೊದಲ ಹಂತವನ್ನು ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ. ಈಗಾಗಲೇ ರಸ್ತೆ ಮಾರ್ಗವಾಗಿ ಬೆಂಗಳೂರಿನಿಂದ ಹೊರಟಿರುವ ಸಿದ್ದರಾಮಯ್ಯ ಮಧ್ಯಾಹ್ನ 12 ಗಂಟೆಗೆ ದೊಡ್ಡನಗರಕ್ಕೆ ಆಗಮಿಸಲಿದ್ದಾರೆ. ಕಾರ್ಯಕ್ರಮದ ಉಸ್ತುವಾರಿಯನ್ನು ಜಲಸಂಪನ್ಮೂಲ ಇಲಾಖೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಹಿಸಿದ್ದಾರೆ. ದೊಡ್ಡನಗರ ಕಾರ್ಯಕ್ರಮ ಬಳಿಕ ಹೆಬ್ಬನಹಳ್ಳಿಗೆ ಬರುವ ಸಿಎಂ, ಡಿಸಿಎಂ ಅಲ್ಲಿ ಗಂಗೆಗೆ ಬಾಗಿನ ಅರ್ಪಿಸಲಿದ್ದಾರೆ.