ಸ್ಮಾರ್ಟ್ ವಾಚ್ ನಲ್ಲಿ ಡಿಜಿಟಲ್ UPI ಕ್ಯೂಆರ್ ಕೋಡ್ ಬಳಸುತ್ತಿರುವ ಆಟೋ ಚಾಲಕ..! ಫೋಟೋ ಎಲ್ಲೆಡೆ ವೈರಲ್

ನ್ಯೂಸ್ ನಾಟೌಟ್: ನಿನ್ನೆಯಷ್ಟೇ(ಸೆ.21) ಕೇಂದ್ರ ಸರ್ಕಾರ ಭಾರತದಲ್ಲಿ ಹೊಸ ಆರ್ಥಿಕ ಕ್ರಾಂತಿಯನ್ನೇ ಬರೆದಿರುವ ಯುಪಿಐ ಪಾವತಿ ಕುರಿತ ಅಂಕಿಅಂಶ ಜಾರಿ ಮಾಡಿತ್ತು. ಇದೀಗ ಇದರ ಬೆನ್ನಲ್ಲೇ ಬೆಂಗಳೂರು ಆಟೋ ಚಾಲಕ ತನ್ನ ಸ್ಮಾರ್ಟ್ ವಾಚ್ ನಲ್ಲಿ UPI ಕ್ಯೂಆರ್ ಕೋಡ್ ಪಾವತಿ ಸ್ವೀಕರಿಸಿರುವ ಫೋಟೋ ವ್ಯಾಪಕ ವೈರಲ್ ಆಗುತ್ತಿದೆ. ಬೆಂಗಳೂರು ಐಟಿ ಸಿಟಿ. ಇಲ್ಲಿ ತಂತ್ರಜ್ಞಾನ, ತಾಂತ್ರಿಕ ವಿಚಾರಗಳಲ್ಲಿ ಇತರ ಎಲ್ಲಾ ನಗರಗಳಿಗಿಂತ ಮುಂದಿದೆ. ಇದು ಹಲವು ಬಾರಿ ಸಾಬೀತಾಗಿದೆ. ಈ ಪೈಕಿ ಇದೀಗ ಬೆಂಗಳೂರು ಆಟೋ ಚಾಲಕನ ಸ್ಮಾರ್ಟ್‌ವಾಚ್‌ನಲ್ಲಿ ಯುಪಿಐ ಕ್ಯೂಆರ್ ಕೋಡ್ ಇದೀಗ ಭಾರಿ ಸದ್ದು ಮಾಡುತ್ತಿದೆ. ಬೆಂಗಳೂರಿನ ಆಟೋ ಚಾಲಕರು ಹಲವು ಸ್ಮಾರ್ಟ್ ಮಾರ್ಗಗಳನ್ನು ತ್ವರಿತವಾಗಿ ಬಳಸಿ ದೇಶಾದ್ಯಂತ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಕ್ರಿಪ್ಟೋ ಕರೆನ್ಸಿ ಭರಾಟೆ ಜೋರಾಗಿದ್ದ ವೇಳೆ ಬೆಂಗಳೂರಿನ ಆಟೋ ಚಾಲಕನೊಬ್ಬ ಕ್ರಿಪ್ಟೊಕರೆನ್ಸಿ ಸ್ವೀಕರಿಸಲಾಗುತ್ತದೆ ಎಂದು ಬೋರ್ಡ್ ಅಂಟಿಸಿದ್ದ. ಕ್ರಿಪ್ಟೋ ಕರೆನ್ಸಿ ಬಗ್ಗೆ ಜನರು ತಿಳಿದುಕೊಳ್ಳುವ ವೇಳೆ ಆಟೋ ಚಾಲಕ ಬಾಡಿಗೆ ಪಾವತಿ ರೂಪದಲ್ಲಿ ಕ್ರಿಪ್ಟೋಕರೆನ್ಸಿ ಸ್ವೀಕರಿಸಲು ಮುಂದಾಗಿದ್ದ. ಈ ರೀತಿಯ ಹಲವು ತಂತ್ರಜ್ಞಾನ ಬಳಕೆಯಲ್ಲಿ ಬೆಂಗಳೂರು ಆಟೋ ಚಾಲಕರು ಎಲ್ಲರಿಗಿಂತ ಮುಂದಿದ್ದಾರೆ ಅನ್ನೋದು ಸಾಬೀತು ಮಾಡಿದ್ದಾರೆ. ಈ ಪಟ್ಟಿಗೆ ನೂತನ ಸೇರ್ಪಡೆಯಾಗಿ ಬೆಂಗಳೂರಿನ ಆಟೋ ಚಾಲಕ ತನ್ನಲ್ಲಿರುವ ಸ್ಮಾರ್ಟ್‌ವಾಚ್‌ನಲ್ಲಿ ತನ್ನ ಯುಪಿಐ ಕ್ಯೂಆರ್ ಕೋಡ್ ಬಳಸಿ ಪಾವತಿ ಮಾಡಿಸಿಕೊಂಡಿದ್ದಾನೆ. ಕ್ಯೂಆರ್ ಕೋಡ್ ಮೂಲಕ ಪಾವತಿ ಮಾಡುವ ಗ್ರಾಹಕರಿಗೆ ಸ್ಮಾರ್ಟ್‌ವಾಚ್ ಮೂಲಕ ಕೋಡ್ ತೋರಿಸಿ ಪಾವತಿಗೆ ಸುಲಭ ದಾರಿ ಅನುಸರಿಸಿದ್ದಾನೆ. ಈ ವಿಚಾರ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.