ನ್ಯೂಸ್ ನಾಟೌಟ್: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಚಾಮುಂಡಿಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ರಾತ್ರಿಯೂ ‘ದಾಸೋಹ’ ನೀಡುವ ಕಾರ್ಯಕ್ಕೆ ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಚಾಲನೆ ನೀಡಿದೆ.
ಮೈಸೂರಿನ ಚಾಮುಂಡಿ ಬೆಟ್ಟ ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಹಾಗೂ ಯಾತ್ರಾಸ್ಥಳ. 1,898 ಎಕರೆ ವಿಸ್ತೀರ್ಣ ಇರುವ ಚಾಮುಂಡಿಬೆಟ್ಟಕ್ಕೆ ವಾರ್ಷಿಕವಾಗಿ 26.82 ಕೋಟಿ ರೂ. ಆದಾಯ ಬರುತ್ತಿದೆ. ಪ್ರತಿವರ್ಷ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಶಕ್ತಿ ಯೋಜನೆ ಬಂದ ನಂತರವಂತೂ ದುಪ್ಪಟ್ಟಾಗಿದೆ. ವರ್ಷದಲ್ಲಿ ಅಂದಾಜು 50 ಲಕ್ಷಕ್ಕೂ ಹೆಚ್ಚು ಭಕ್ತರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುತ್ತಾರೆ ಎಂದು ಅಂಕಿ-ಅಂಶ ಹೇಳುತ್ತದೆ. ಇಂತಹ ಧಾರ್ಮಿಕ ಕೇಂದ್ರದಲ್ಲಿಇಷ್ಟು ದಿನ ಬೆಳಗ್ಗೆ ಮತ್ತು ಮಧ್ಯಾಹ್ನ ಭಕ್ತರಿಗೆ ದಾಸೋಹ ನೀಡಲಾಗುತ್ತಿತ್ತು. ಇದೀಗ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರಾತ್ರಿಯೂ ದಾಸೋಹ ನೀಡಲು ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.
ಇತ್ತೀಚೆಗೆ ಚಾಮುಂಡಿ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಸಭೆ ನಡೆಸಲಾಗಿತ್ತು. ಭಕ್ತರಿಗೆ ಗುಣಮಟ್ಟದ ಸೇವೆ ನೀಡುವ ಕುರಿತು ಸಾಕಷ್ಟು ಚರ್ಚೆಯಾಧಿಯಿತು. ರಾತ್ರಿ ದಾಸೋಹ ಆರಂಭಿಸುವ ವಿಚಾರವೂ ಬಂದಿತ್ತು. ಶ್ರೀಕ್ಷೇತ್ರ ಧರ್ಮಸ್ಥಳದ ಮಾದರಿಯಲ್ಲೇ ನಿತ್ಯವೂ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ದಾಸೋಹ ನೀಡುವಂತೆ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಹೀಗಾಗಿ ಬೆಟ್ಟದಲ್ಲಿ ಇದೀಗ ರಾತ್ರಿಯೂ ದಾಸೋಹ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.