ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬರು ಎರಡು ಫ್ರೋಜನ್ ಬರ್ಗರ್ಗಳನ್ನು ಚಾಕುವಿಂದ ಬೇರ್ಪಡಿಸುವ ಸಂದರ್ಭದಲ್ಲಿ ಅಕಸ್ಮಾತ್ ಆಗಿ ಚಾಕು ಹೊಟ್ಟೆಗೆ ತಗುಲಿ ಸಾವನ್ನಪ್ಪಿದ ಘಟನೆ ಇಂಗ್ಲೆಂಡ್ನಲ್ಲಿ ನಡೆದಿದೆ.
ಈ ಘಟನೆ ಕಳೆದ ವರ್ಷ ಜುಲೈನಲ್ಲಿ ನಡೆದಿದ್ದು, ತನಿಖೆಯ ಬಳಿಕ ಈಗ ಕಾರಣ ಬಯಲಾಗಿದೆ. ಒಬ್ಬಂಟಿಯಾಗಿ ವಾಸಿಸುತ್ತಿದ್ದ 57 ವರ್ಷ ವಯಸ್ಸಿನ ಬ್ಯಾರಿ ಗ್ರಿಫಿತ್ಸ್ ಎಂಬವರು ತಮ್ಮ ಮನೆಯಲ್ಲಿ ಬರ್ಗರ್ ಕಟ್ ಮಾಡುವ ಸಂದರ್ಭದಲ್ಲಿ ಅವರ ಹೊಟ್ಟೆಗೆ ಚಾಕು ತಗುಲಿದ್ದು, ಚಾಕು ಬಲವಾಗಿ ಚುಚ್ಚಿದ ಕಾರಣ ಅವರು ಸಾವನ್ನಪ್ಪಿದ್ದಾರೆ.
ಒಬ್ಬಂಟಿಯಾಗಿ ವಾಸಿಸುತ್ತಿದ್ದರಿಂದ ಅವರ ಸಾವಿನ ಸುದ್ದಿ ಯಾರಿಗೂ ತಿಳಿದಿರಲಿಲ್ಲ. ಹಲವು ದಿನಗಳ ನಂತರ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದ್ದು, ತಪಾಸಣೆಗಾಗಿ ಮನೆಗೆ ಬಂದಾಗ ಅಡುಗೆ ಮನೆ ಮತ್ತು ಮಲಗುವ ಕೋಣೆಯ ಉದ್ದಕ್ಕೂ ರಕ್ತ ಚೆಲ್ಲಿರುವ ಕಲೆ ಇರುವುದನ್ನು ಕಂಡುಕೊಂಡರು. ಅದೇ ಸಂದರ್ಭದಲ್ಲಿ ಸಾಕ್ಷಿಗಳನ್ನು ಕಲೆ ಹಾಕಿದಾಗ ಈ ವ್ಯಕ್ತಿಯನ್ನು ಬೇರೆ ಯಾರು ಕೊಂದಿಲ್ಲ ಎಂಬುದು ಕೂಡಾ ಪತ್ತೆಯಾಗಿದೆ.
ಈ ಪ್ರಕರಣವನ್ನು ಭೇದಿಸಲು ಸಾಧ್ಯವಾಗದೆ ಪೊಲೀಸರು ಈ ವಿಚಾರಣೆಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆಯ ಸಂದರ್ಭದಲ್ಲಿ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಪಾರ್ಶ್ವವಾಯುಗೆ ತುತ್ತಾಗಿ ಒಂದು ಕೈಯ ಸಮತೋಲನವನ್ನೇ ಕಳೆದುಕೊಂಡಿದ್ದ ಗ್ರಿಫಿತ್ಸ್ ಫ್ರೋಜನ್ ಬರ್ಗರ್ ಅನ್ನು ಬೇರ್ಪಡಿಸುವ ಸಂದರ್ಭದಲ್ಲಿ ಅವರ ಹೊಟ್ಟೆಗೆ ಅಕಸ್ಮಾತ್ ಆಗಿ ಚಾಕು ಚುಚ್ಚಿ ಹೋಗಿದೆ ಎಂಬ ವಿಚಾರ ತಿಳಿದು ಬಂದಿದೆ. ಇದು ಆಕಸ್ಮಿಕ ಸಾವು ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
Click