ನ್ಯೂಸ್ ನಾಟೌಟ್: ರೈಲಿನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದಾರೆ ಎಂಬ ಶಂಕೆಯಿಂದ ವೃದ್ಧನಿಗೆ ಸಹಪ್ರಯಾಣಿಕರು ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರದಲ್ಲಿ ಧುಲೆ ಎಕ್ಸ್ಪ್ರೆಸ್ ರೈಲಿನಲ್ಲಿ ನಡೆದಿದೆ.
ಜಲಗಾಂವ್ ಜಿಲ್ಲೆಯ ನಿವಾಸಿ ಅಶ್ರಫ್ ಮುನ್ಯಾರ್ ಅವರು ಮಾಲೆಗಾಂವ್ ನಲ್ಲಿರುವ ತಮ್ಮ ಮಗಳ ಮನೆಗೆ ಧುಲೆ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭ ಎರಡು ದೊಡ್ಡ ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ಮಾಂಸವನ್ನು ತಂದಿದ್ದರು. ಇದನ್ನು ಗಮನಿಸಿದ ಸುಮಾರು ಹನ್ನೆರಡು ಜನರಿದ್ದ ತಂಡ ವಿಚಾರಣೆ ನಡೆಸಿ “ನೀವು ಏನು ಸಾಗಿಸುತ್ತಿದ್ದೀರಿ? ನೀವು ಎಲ್ಲಿಗೆ ಹೋಗುತ್ತಿದ್ದೀರಿ? ನೀವು ಎಲ್ಲಿಂದ ಬಂದಿದ್ದೀರಿ? ಎಂದೆಲ್ಲಾ ಪ್ರಶ್ನಿಸಿದ್ದಾರೆ.
ಹಿರಿಯ ವ್ಯಕ್ತಿಯು ತನ್ನ ಮಗಳ ಕುಟುಂಬಕ್ಕಾಗಿ ಮಾಂಸ ತೆಗೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ವೃದ್ಧನ ಉತ್ತರದಿಂದ ತೃಪ್ತಿಯಾಗದ ಸಹ ಪ್ರಯಾಣಿಕರ ಗುಂಪು ವೃದ್ಧನನ್ನು ಮತ್ತಷ್ಣು ಕೆಣಕಿ ಪ್ರಶ್ನಿಸಿದ್ದಾರೆ. ಯಾವ ಮಾಂಸ ಎಂದು ಕೇಳಿದ್ದಾರೆ. ಒಂದು ಹಂತದಲ್ಲಿ ವೃದ್ಧ ಇದು ಕೋಣದ ಮಾಂಸ ಎಂದು ಹೇಳಿದ್ದಾರೆ.
“ನಾವು ಅದನ್ನು ಪರೀಕ್ಷಿಸಿದ ನಂತರ ಯಾವುದರ ಮಾಂಸ ಎಂದು ಗೊತ್ತಾಗುತ್ತದೆ” ಎಂದು ಒಬ್ಬ ವ್ಯಕ್ತಿ ಪ್ರತಿಕ್ರಿಯಿಸಿದ್ದಾನೆ. ಇದು ಶ್ರಾವಣ ಮಾಸ. ಇದು ನಮ್ಮ ಹಬ್ಬದ ಸಮಯ, ಈ ಸಮಯದಲ್ಲಿ ನೀವು ಯಾಕೆ ಹೀಗೆ ಮಾಡುತ್ತಿದ್ದೀರಿ” ಎಂದು ಮತ್ತೊಬ್ಬ ಪ್ರಶ್ನಿಸಿದ್ದಾನೆ. ಅಲ್ಲದೇ ವೃದ್ಧನ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.