ನ್ಯೂಸ್ ನಾಟೌಟ್: ಈಗಿನ ಕೆಲವು ನಾಯಕರು, ಆಡಳಿತ ಪ್ರತಿನಿಧಿಗಳು ಬಡವರ ಒಂದು ಕೆಲಸಕ್ಕಾಗಿ ಸಾವಿರ ಸಲ ಕಚೇರಿಗಳಿಗೆ ಅಲೆದಾಡುವಂತೆ ಮಾಡುತ್ತಾರೆ. ಇಂತಹವರ ನಡುವೆ ಕೇವಲ ಒಂದು ಫೋನ್ ಕರೆಗೆ ಸಮಸ್ಯೆಯನ್ನು ಸ್ಥಳದಲ್ಲೇ ನಿಂತು ಬಗೆ ಹರಿಸಿದ ಮಹಿಳೆಯೊಬ್ಬರ ಸಾಧನೆಗೆ ಈಗ ಮೆಚ್ಚುಗೆ ವ್ಯಕ್ತವಾಗಿದೆ.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದ್ರೆ ಅಧಿಕಾರವಹಿಸಿದ ಕೆಲವೇ ದಿನಗಳಲ್ಲಿ ಜನ ಮೆಚ್ಚುಗೆಯ ಕೆಲಸ ಮಾಡಿದ್ದಾರೆ. ಕೆಲವು ತಿಂಗಳಿನಿಂದ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸೇರುವ ಸುಳ್ಯ ನಗರದ ಜ್ಯೋತಿ ಸರ್ಕಲ್ ಬಳಿಯ ತಿರುವಿನ ರಸ್ತೆಯು ಹೊಂಡ ಗುಂಡಿಗಳಿಂದ ಕೂಡಿತ್ತು. ಈ ಬಗ್ಗೆ ಹಲವು ಸಲ ಜನ ಪ್ರತಿನಿಧಿಗಳನ್ನು ಸರಿಪಡಿಸುವಂತೆ ಕೇಳಿಕೊಂಡರೂ ಸರಿಪಡಿಸಿರಲಿಲ್ಲ. ಈ ಕುರಿತಾಗಿ ಸ್ಥಳೀಯ ರಿಕ್ಷಾ ಚಾಲಕ ಅಕ್ಷತ್ ಹಾಗೂ ಇತರೆ ರಿಕ್ಷಾ ಚಾಲಕರು ಶಶಿಕಲಾ ನೀರಬಿದ್ರೆ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.
ಯಾರು.. ಏನು.. ಅನ್ನುವುದು ಪರಿಚಯ ಇಲ್ಲದಿದ್ದರೂ ಫೋನ್ ಕರೆಯನ್ನೇ ದೂರೆಂದು ಸ್ವೀಕರಿಸಿ ಶಶಿಕಲಾ ಸ್ಥಳಕ್ಕೆ ಬಂದಿದ್ದಾರೆ. ಆಟೋ ರಿಕ್ಷಾ ಚಾಲಕರ ಮನವಿಯನ್ನು ಆಲಿಸಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಒಳಗೆ ಸರಿಪಡಿಸಿಕೊಡುತ್ತೇನೆಂದು ಹೇಳಿ ಅಲ್ಲಿಂದ ಹೊರಟಿದ್ದಾರೆ. ಮರುದಿನ ಬೆಳಗ್ಗೆ ಹೊಂಡ-ಗುಂಡಿಗಳನ್ನು ಮುಚ್ಚಿಸಿಕೊಡುವ ಕೆಲಸ ಮಾಡಿದ್ದಾರೆ. ಅಧ್ಯಕ್ಷರ ಈ ಕೆಲಸದಿಂದ ಆ ಭಾಗದಲ್ಲಿನ ಕಾಲೇಜು, ಶಾಲೆ, ಅಂಗನವಾಡಿ ಹಾಗೂ ಆಸ್ಪತ್ರೆಗೆ ಹೋಗುವ ಜನರು ಈಗ ನಿಟ್ಟುಸಿರು ಬಿಡುವಂತಾಗಿದೆ.