ನ್ಯೂಸ್ ನಾಟೌಟ್: ಬಿಜೆಪಿಗೆ ಸೆಡ್ಡು ಹೊಡೆದು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಅಲ್ಪ ಅಂತರದಿಂದ ಸೋಲುಂಡ ಹಾಲಿ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
47 ವರ್ಷದ ಮಹಿಳೆ ಅರುಣ್ ಪುತ್ತಿಲ ತನ್ನ ಇಚ್ಛೆಗೆ ವಿರುದ್ಧವಾಗಿ ಬೆಂಗಳೂರಿನ ಹೋಟೆಲ್ ವೊಂದಕ್ಕೆ ಕರೆಸಿಕೊಂಡು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಮಹಿಳೆ ನೀಡಿದ ದೂರಿನ ಪ್ರಕಾರವಾಗಿ ಐಪಿಸಿ ಸೆಕ್ಷನ್ 417, 354a, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಅರುಣ್ ಪುತ್ತಿಲ ಅವರು, 2023ರಲ್ಲಿ ಪುತ್ತೂರು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಿಜೆಪಿಗೆ ಠಕ್ಕರ್ ಕೊಟ್ಟು ಹಿಂದುತ್ವದ ಹೆಸರಿನಲ್ಲಿ ಸ್ಪರ್ಧೆ ಮಾಡಿ ಪ್ರಖ್ಯಾತಿ ಪಡೆದಿದ್ದರು. ಪುತ್ತಿಲ ಅವರ ಪ್ರಖ್ಯಾತಿ ಮತ್ತು ಹಿಂದುತ್ವದ ಪ್ರತಿಪಾದನೆಯಿಂದ ಮಹಿಳೆಯೊಬ್ಬರು ಅಭಿಮಾನಿಯಾಗಿದ್ದರು. ಪುತ್ತಿಲಗೆ ಅಭಿಮಾನಿ ಆಗಿ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಿದ್ದರು. ಜೊತೆಗೆ ಪುತ್ತಿಲಗೆ ನೈತಿಕ ಬೆಂಬಲವನ್ನೂ ನೀಡುತ್ತಿದ್ದರು. ಬಳಿಕ ಪರಿಚಯವಾದ ಮೇಲೆ ಪುತ್ತಿಲ ಅವರು 2023ರ ಜೂನ್ನಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ಗೆ ಕರೆಸಿಕೊಂಡು ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.
2024ರ ಲೋಕಸಭಾ ಚುನಾವಣೆಯ ಬಳಿಕ ನನ್ನೊಂದಿಗೆ ಮಾತುಕತೆ ಕಡಿಮೆಗೊಳಿಸಿದ್ದರು. ನನ್ನನ್ನು ಸಂಪೂರ್ಣವಾಗಿ ಶೋಷಣೆಗೆ ಒಳಪಡಿಸಿ ಅವರ ಆಸೆ ತೀರಿಸಿಕೊಂಡು ನನ್ನನ್ನು ದೂರ ಮಾಡಿದರು. ಆ ಭಯದಿಂದ ನನ್ನ ನಿವಾಸವನ್ನು ಪುತ್ತೂರಿಗೆ ಸ್ಥಳಾಂತರಿಸಿ ಬಾಡಿಗೆ ಮನೆಯಲ್ಲಿ ನನ್ನ ಮಗಳೊಂದಿಗೆ ಉದ್ಯೋಗ ಹಾಗೂ ವರಮಾನವಿಲ್ಲದೇ ಕಷ್ಟಪಡುತ್ತಿದ್ದೇನೆ. ನನಗೆ ಮತ್ತು ನನ್ನ ಮಗಳಿಗೆ ಪುತ್ತಿಲರು ಮಾಡಿದ ದ್ರೋಹ, ಅನ್ಯಾಯ, ವಿಶ್ವಾಸ ದ್ರೋಹಕ್ಕೆ ಕಾನೂನು ಕ್ರಮ ಕೈಗೊಂಡು ನನಗೆ ಮತ್ತು ನನ್ನ ಮಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.