ನ್ಯೂಸ್ ನಾಟೌಟ್: ಸಮರ್ಪಕ ತನಿಖೆ ನಡೆಸದೆ ಮುಂಬೈ ಮೂಲದ ನಟಿ-ರೂಪದರ್ಶಿ ಕಾದಂಬರಿ ಜೇಠ್ವಾನಿ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಿ, ಅವರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮೂವರು ಐಪಿಎಸ್ ಅಧಿಕಾರಿಗಳನ್ನು ಆಂಧ್ರ ಪ್ರದೇಶ ಸರ್ಕಾರ ಅಮಾನತ್ತುಗೊಳಿಸಿದೆ.
ಮಾಜಿ ಗುಪ್ತಚರ ವಿಭಾಗದ ಮುಖ್ಯಸ್ಥ ಪಿ.ಸೀತಾರಾಂ ಆಂಜನೇಯುಲು, ಮಾಜಿ ವಿಜಯವಾಡ ಪೊಲೀಸ್ ಆಯುಕ್ತ ಕ್ರಾಂತಿ ರಂಗ ಟಾಟಾ, ಹಾಗೂ ಮಾಜಿ ಉಪ ಪೊಲೀಸ್ ಆಯುಕ್ತ ವಿಶಾಲ್ ಗುನ್ನಿ ಎಂಬವರು ಅಮಾನತ್ತುಗೊಂಡಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ತನ್ನ ವಿರುದ್ಧ ಫೋರ್ಜರಿ ಮತ್ತು ಸುಲಿಗೆ ಪ್ರಕರಣವನ್ನು ದಾಖಲಿಸಿದ್ದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಚಿತ್ರ ನಿರ್ಮಾಪನ ಕೆ.ವಿ.ಆರ್.ವಿದ್ಯಾಸಾಗರ್ ಅವರೊಂದಿಗೆ ಸೇರಿಕೊಂಡು ಮೇಲಿನ ಅಧಿಕಾರಿಗಳು ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಜೇಠ್ವಾನಿ ಎನ್ಟಿ ಆರ್ ಪೊಲೀಸ್ ಆಯುಕ್ತ ಎಸ್.ವಿ.ರಾಜಶೇಖರ್ ಬಾಬು ಬಳಿ ಅಧಿಕೃತ ದೂರು ದಾಖಲಿಸಿದ್ದರು. ವಿದ್ಯಾಸಾಗರ್ ಅವರೊಂದಿಗೆ ಸದರಿ ಉನ್ನತ ದರ್ಜೆಯ ಅಧಿಕಾರಿಗಳು ಕೈಮಿಲಾಯಿಸಿ, ನನಗೆ ಮತ್ತು ನನ್ನ ಪೋಷಕರಿಗೆ ಕಿರುಕುಳ ನೀಡಲು ನನಗೆ ಯಾವುದೇ ಪೂರ್ವ ನೋಟಿಸ್ ನೀಡದೆ ಮುಂಬೈನಿಂದ ವಿಜಯವಾಡಕ್ಕೆ ಕರೆದೊಯ್ದಿದ್ದರು ಎಂದು ಅವರು ಆರೋಪಿಸಿದ್ದರು.
ರಾಜಕಾರಣಿಯ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಲು ಬಂದ ನನ್ನನ್ನು ಮತ್ತು ನನ್ನ ವಯೋವೃದ್ಧ ಪೋಷಕರನ್ನು ಪೊಲೀಸರು ಅಕ್ರಮವಾಗಿ ಬಂಧಿಸಿದ್ದರು ಹಾಗೂ ನಾವು 40 ದಿನಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿ ಕಳೆಯಬೇಕಾಗಿ ಬಂದಿತ್ತು ಎಂದೂ ಮುಂಬೈ ಮೂಲದ ಜೇಠ್ವಾಗನಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಈ ದೂರನ್ನು ಆಧರಿಸಿ ನಡೆದ ತನಿಖೆಯ ಸಂದರ್ಭದಲ್ಲಿ, ಎಫ್ ಐ ಆರ್ ದಾಖಲಾಗುವುದಕ್ಕೂ ಮುನ್ನವೇ ಜೇಠ್ವಾನಿಯನ್ನು ಬಂಧಿಸಲು ಆಂಜನೇಯುಲು ಇನ್ನಿಬ್ಬರು ಅಧಿಕಾರಿಗಳಿಗೆ ಆದೇಶಿಸಿದ್ದರು ಎಂಬ ಸಂಗತಿ ಬಯಲಾಗಿದೆ. ಹೀಗಾಗಿ ಆ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ.
ಕಳೆದ ತಿಂಗಳು ಎನ್ಟಿಆರ್ ಪೊಲೀಸ್ ಕಮಿಷನರ್ ಎಸ್ವಿ ರಾಜಶೇಖರ್ ಬಾಬು ಅವರನ್ನು ಭೇಟಿಯಾಗಿ ರಾಜಕೀಯ ಮುಖಂಡ, ಚಲನಚಿತ್ರ ನಿರ್ಮಾಪಕ ಕೆವಿಆರ್ ವಿದ್ಯಾಸಾಗರ್ ವಿರುದ್ಧ ದೂರು ದಾಖಲಿಸಿದ್ದ ನಟಿ, ವೈಎಸ್ಆರ್ಸಿಪಿ ಆಡಳಿತದಲ್ಲಿ ನಟಿ ಅನುಭವಿಸಿದ ಕಿರುಕುಳದ ಬಗ್ಗೆ ಮಹತ್ವದ ವಿವರಗಳನ್ನು ಸಾಕ್ಷಿ ಸಮೇತ ನೀಡಿದ್ದರು.
Click