ನ್ಯೂಸ್ ನಾಟೌಟ್: ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರವು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ನೇಮಕ ಮಾಡಿದ್ದು, ರಾಜ್ಯದಿಂದ ಕೇರಳಕ್ಕೆ ಆಗಬೇಕಾದ ಸಹಾಯದ ನೇತೃತ್ವ ವಹಿಸಿದೆ. ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಗುರುವಾರ(ಆ.1) 275ಕ್ಕೆ (ಅಧಿಕೃತ ಸಂಖ್ಯೆ 167) ಏರಿಕೆಯಾಗಿದೆ ಮತ್ತು 240(ಅಧಿಕೃತ ಸಂಖ್ಯೆ 191) ಮಂದಿ ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ.
ಭೀಕರ ಭೂಕುಸಿತದಲ್ಲಿ ನೂರಾರು ಜನ ಗಾಯಗೊಂಡಿದ್ದು, ಸಾವಿರಾರು ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಸರ್ಕಾರದ ಸೂಚನೆ ಬೆನ್ನಲ್ಲೇ ಸಂತೋಷ್ ಲಾಡ್ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳೊಂದಿಗೆ ಬುಧವಾರ(ಜು.31) ಮಧ್ಯಾಹ್ನ ವಯನಾಡಿಗೆ ಭೇಟಿ ನೀಡಿದ್ದು, ನೆರವಿನ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಭೂಕುಸಿತದಲ್ಲಿ ಚಾಮರಾಜನಗರದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, 10 ಜನರನ್ನು ರಕ್ಷಿಸಲಾಗಿದೆ. ಒಡಿಶಾ ಮೂಲದ ಬೆಂಗಳೂರಿನ ವೈದ್ಯರೂ ಕೂಡ ಸಂಕಷ್ಟಕ್ಕೆ ಸಿಲುಕಿದ್ದರು. ಅವರನ್ನೂ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಕರ್ನಾಟಕದ ಇನ್ನೂ ಎಷ್ಟು ಜನರು ವಯನಾಡಿನಲ್ಲಿ ಸಿಲುಕಿಕೊಂಡಿದ್ದಾರೆ ಎಂಬುದು ತಿಳಿದಿಲ್ಲ. ಇಲ್ಲಿಯವರೆಗೆ ರಕ್ಷಣೆಗೊಳಗಾದ ಕರ್ನಾಟಕ ಮೂಲದವರು ವಯಾನಾಡಿನಲ್ಲಿ ಕಳೆದ ಕಳೆದ 30-40 ವರ್ಷಗಳಿಂದ ವಾಸವಿದ್ದರು ಎಂಬ ಮಾಹಿತಿ ಇದೆ ಎಂದು ಸಂತೋಷ್ ಲಾಡ್ ತಿಳಿಸಿದ್ದಾರೆ.
Click