ನ್ಯೂಸ್ ನಾಟೌಟ್: ಕೆಲವೊಂದು ಘಟನೆಗಳಿಗೆ ನಗಬೇಕೋ ಅಳಬೇಕೋ ಗೊತ್ತಾಗಲ್ಲ. ಸಾಮಾನ್ಯವಾಗಿ ನಾವು ಸೈಡ್ ನಲ್ಲಿ ಜಾಗ ನೋಡಿಕೊಂಡು ನಮ್ಮ ಕಾರು ಪಾರ್ಕ್ ಮಾಡ್ತೀವಿ. ಆದರೆ ಇಲ್ಲಿಬ್ಬರು ಕಾರು ಚಾಲಕರು ಬಸ್ ಸಂಚರಿಸುವ ನಡು ರಸ್ತೆಯಲ್ಲೇ ಪಾರ್ಕ್ ಮಾಡಿ ಚಿಂತೆಯಿಲ್ಲದೆ ಸಂತೆಗೆ ಹೋಗಿದ್ದಾರೆ. ಪರಿಣಾಮ ಎರಡು ಕೆಎಸ್ ಆರ್ ಟಿಸಿ ಸಿಟಿ ಬಸ್ ನಲ್ಲಿದ್ದ ಜನ, ಡ್ರೈವರ್ , ಕಂಡೆಕ್ಟರ್ ಅರ್ಧಗಂಟೆಗೂ ಹೆಚ್ಚು ಕಾಲ ಕಾರು ಮಾಲೀಕರನ್ನು ಕಾಯುತ್ತಾ ಕುಳಿತ ಅಪರೂಪದ ಸ್ವಾರಸ್ಯಕರ ಘಟನೆ ಉಪ್ಪಿನಂಗಡಿಯಲ್ಲಿ ಇದೀಗ (ಆ.30) ಮಧ್ಯಾಹ್ನ ನಡೆದಿದೆ.
ಉಪ್ಪಿನಂಗಡಿಯಲ್ಲಿ ಇದೀಗ ರಾಷ್ಟ್ರೀಯ ಹೆದ್ದಾರಿ ಕೆಲಸ ಭರದಿಂದ ನಡೆಯುತ್ತಿದೆ. ಹೀಗಾಗಿ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಬರುವುದಕ್ಕೆ ಸರ್ಕಾರಿ ಸಿಟಿ ಬಸ್ ಗಳಿಗೆ ಸಬ್ ರೋಡ್ ವ್ಯವಸ್ಥೆ ಮಾಡಿಕೊಡಲಾಗಿದೆ. ಈ ದಾರಿಯಲ್ಲಿ ಒಂದು ಬ್ರಿಜಾ ಕಾರು ಹಾಗೂ ಮತ್ತೊಂದು ಓಮ್ನಿ ಕಾರನ್ನು ನಿಲ್ಲಿಸಿ ಕ್ರಮವಾಗಿ ಅದರ ಮಾಲೀಕರು ಸಂತೆ ಸುತ್ತುವುದಕ್ಕೆ ಹೋಗಿದ್ದಾರೆ. ಇತ್ತ ಮಂಗಳೂರಿನಿಂದ ಎರಡು ಸರ್ಕಾರಿ ಸಿಟಿ ಬಸ್ ಗಳು ಬಂದಿವೆ. ಎರಡು ಕಾರು ಅಡ್ಡ ನಿಂತಿದ್ದರಿಂದ ಬಸ್ ಗೆ ಹೋಗುವುದಕ್ಕೆ ದಾರಿ ಇಲ್ಲದೆ ಅನಿವಾರ್ಯವಾಗಿ ನಿಲ್ಲಿಸಲಾಯಿತು. ಅರ್ಧ ಗಂಟೆ ಕಳೆದ ಬಳಿಕ ಎರಡೂ ಕಾರಿನ ಮಾಲೀಕರು ಆರಾಮವಾಗಿ ಕಾರಿನತ್ತ ಬರುವಾಗ ಟ್ರಾಫಿಕ್ ಜಾಮ್ ಆಗಿ ಜನರಿಗೆ ಕಿರಿಕಿರಿ ಆಗಿರುವುದು ಗೊತ್ತಾಗಿದೆ. ತಕ್ಷಣ ಜನರ ಬೈಗುಳ ತಿಂದುಕೊಂಡೇ ಕಾರನ್ನು ಅಲ್ಲಿಂದ ತೆರವುಗೊಳಿಸಿದರು. ಸರ್ಕಾರಿ ಬಸ್ ಚಾಲಕರಿಗೆ ಇಂತಿಷ್ಟು ಸಮಯದಲ್ಲಿ ನಿಲ್ದಾಣ ತಲುಪಬೇಕು ಅನ್ನುವ ಕಂಡೀಷನ್ ಇರುತ್ತದೆ. ಇಂತಹ ಸಂದರ್ಭದಲ್ಲಿ ಚಾಲಕರಿಗೆ ಸಮಸ್ಯೆಯಾಗಿದೆ ಎಂದು ತಿಳಿದು ಬಂದಿದೆ.