ನ್ಯೂಸ್ ನಾಟೌಟ್: ಭಾರತ ದೇವರ ದೇಶ. ಇಲ್ಲಿ ದೇವರನ್ನು ನಂಬುವಷ್ಟು ಜನ ಯಾರನ್ನೂ ನಂಬುವುದಿಲ್ಲ. ಅಭಿವೃದ್ಧಿಗೆ ಏನಾದರೂ ದೇಣಿಗೆ ಕೊಡಿ ಎಂದರೂ ಜನ ಕೊಡುವುದು ಕಷ್ಟ. ಆದರೆ ದೇವರಿಗೆ ದೇಣಿ ಎಂದರೆ ಕೇಳದೆಯೂ ಕೊಡುವಷ್ಟು ಹೃದಯ ಶ್ರೀಮಂತರು ನಮ್ಮ ಜನ. ಸಾಮಾನ್ಯವಾಗಿ ಶಿವ, ಗಣೇಶ, ಪಾರ್ವತಿ, ವಿಷ್ಣು ಸೇರಿದಂತೆ ಅನೇಕ ಮಂದಿರಗಳನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಏಲಿಯನ್ ದೇವಾಲಯ ಇದೆ. ಅನ್ಯಗ್ರಹ ಜೀವಿಗಳಿಗೆ ಭಾರತದಲ್ಲಿ ದೇವಸ್ತಾನವೇ ಎಂದು ನೀವು ಅಚ್ಚರಿ ಪಡಬಹುದು. ಆದರೆ ಇದು ನಿಜ.
ತಮಿಳುನಾಡಿನ ಸೇಲಂನಲ್ಲಿ ವ್ಯಕ್ತಿಯೊಬ್ಬರು ಅನ್ಯಲೋಕದ ದೇವರಿಗಾಗಿ ದೇವಾಲಯವನ್ನು ನಿರ್ಮಿಸಿ ಸುದ್ದಿಯಾಗಿದ್ದಾರೆ. ಅನ್ಯ ಗ್ರಹದ ಏಲಿಯನ್ ಜೀವಿ ಭಕ್ತರನ್ನು ಪ್ರಾಕೃತಿಕ ವಿಕೋಪಗಳಿಂದ ರಕ್ಷಿಸುತ್ತದೆ ಅನ್ನುವ ನಂಬಿಕೆಯಿಂದ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ.
ಸೇಲಂನ ಮಲ್ಲಮೂಪಂಬಟ್ಟಿಯ ಲೋಗನಾಥನ್ ಅವರು ಸುಮಾರು ಮುಕ್ಕಾಲು ಎಕರೆ ಭೂಮಿಯಲ್ಲಿ ಹರಡಿರುವ ಅನ್ಯಗ್ರಹ ದೇವರನ್ನು ಪ್ರತಿಷ್ಠಾಪಿಸಿದ್ದಾರೆ. “ನಾನು ಅನ್ಯಗ್ರಹ ಜೀವಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ದೇವಾಲಯವನ್ನು ನಿರ್ಮಿಸಲು ಅವರಿಂದ ಅನುಮತಿ ಸಹ ಪಡೆದಿದ್ದೇನೆ” ಎಂದು ಅವರು ಹೇಳುತ್ತಾರೆ. ಪರಕೀಯ ‘ದೇವರು’ ಅಲ್ಲದೆ ಶಿವ, ಪಾರ್ವತಿ, ಮುರುಗನ್, ಕಾಳಿ ಮುಂತಾದ ದೇವ-ದೇವತೆಗಳ ವಿಗ್ರಹಗಳನ್ನು ಸಹ ನೆಲದಿಂದ 11 ಅಡಿ ಕೆಳಗಿರುವ ನೆಲಮಾಳಿಗೆಯಲ್ಲಿ ಸ್ಥಾಪಿಸಲಾಗಿದೆ.
ಜಗತ್ತಿನಲ್ಲಿ ನೈಸರ್ಗಿಕ ವಿಕೋಪಗಳು ಹೆಚ್ಚುತ್ತಿರುವಾಗ, ಅವುಗಳನ್ನು ತಡೆಯುವ ಶಕ್ತಿ ಅನ್ಯಗ್ರಹ ಜೀವಿಗಳಿಗೆ ಇದೆ ಎಂದು ಲೋಗನಾಥನ್ ಅವರು ನಂಬುತ್ತಾರೆ. ಅವರ ನಂಬಿಕೆಯ ಪ್ರಕಾರ, ಏಲಿಯನ್ ಗಳು ಚಲನಚಿತ್ರಗಳಲ್ಲಿ ಚಿತ್ರಿಸುವಂತಹವರಲ್ಲ. ಬಾಳೆ ಎಲೆಯನ್ನು ದೇಹಕ್ಕೆ ಸುತ್ತಿಕೊಂಡರೆ ಅನ್ಯಗ್ರಹ ಜೀವಿಗಳ ವಿಕಿರಣದಿಂದ ಪಾರಾಗಬಹುದು ಎಂಬ ಹೇಳಿಕೆಯನ್ನೂ ಲೋಗನಾಥನ್ ನೀಡಿದ್ದಾರೆ.
ಲೋಕನಾಥನ್ ಅವರು ಅನ್ಯಗ್ರಹ ಜೀವಿಗಳಿಗಾಗಿ ನಿರ್ಮಿಸಿರುವ ದೇಗುಲದ ನಿರ್ಮಾಣ ಕಾರ್ಯ ಇನ್ನೂ ನಡೆಯುತ್ತಿದ್ದು, ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿರುವುದರಿಂದ ಇಲ್ಲಿನ ವಿಶಿಷ್ಟ ದೇವಾಲಯದ ಕುರಿತು ಚರ್ಚೆ ನಡೆದಿದೆ.