ನ್ಯೂಸ್ ನಾಟೌಟ್: ಸ್ತನ್ಯಪಾನಕ್ಕೆ ಸಂಬಂಧಿಸಿದ್ದಂತೆ ಜಾಗೃತಿ ಮೂಡಿಸಲು ಹಾಗೂ ತಾಯಂದಿರನ್ನು ಶಿಶುವಿಗೆ ಹಾಲುಣಿಸುವಂತೆ ಪ್ರೇರೆಪಿಸಲು ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಚರಿಸಲಾಯಿತು.
ಆಗಸ್ಟ್ 1 ರಿಂದ ಆಗಸ್ಟ್ 7ರ ವರೆಗೆ ಒಂದು ವಾರಗಳ ಕಾಲ ಈ ಜಾಗೃತಿ ಕಾರ್ಯಕ್ರಮ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಇಂದು (ಆಗಸ್ಟ್ 1) ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಕ್ಕಳ ವಿಭಾಗ,ಸ್ತ್ರೀ ಮತ್ತು ಪ್ರಸೂತಿ ವಿಭಾಗ ಹಾಗೂ ಸಮುದಾಯ ವೈದ್ಯಶಾಸ್ತ್ರ ವಿಭಾಗದ ವತಿಯಿಂದ ವಿಶೇಷ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಇದರ ಅಧ್ಯಕ್ಷರಾದ ಡಾ ಕೆವಿ ಚಿದಾನಂದ ದೀಪ ಬೆಳಗುವುದರೊಂದಿಗೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಹುಟ್ಟಿದ ಮಗುವಿಗೆ ತಾಯಿಯ ಎದೆಹಾಲು ಅತ್ಯಗತ್ಯ. ಹೀಗಾಗಿ ಈ ಸ್ತನ್ಯಪಾನಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವುದು ಹಾಗೂ ತಾಯಂದಿರನ್ನು ಹಾಲುಣಿಸಲು ಪ್ರೇರೆಪಿಸುವುದರ ಜೊತೆಗೆ, ಆರೋಗ್ಯಕ್ಕೆ ಸಂಬಂಧಪಟ್ಟ ಅಗತ್ಯ ಬೆಂಬಲವನ್ನು ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ನುಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ ನೀಲಾಂಬಿಕೈ ನಟರಾಜನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಸಂಯೋಜಕರಾದ ಪೀಡಿಯಾಟ್ರಿಕ್ಸ್ ವಿಭಾಗದ ಪ್ರಾಧ್ಯಾಪಕರಾದ ಡಾ ಸುಧಾ ರುದ್ರಪ್ಪ, ಸ್ತ್ರೀ ಮತ್ತು ಪ್ರಸೂತಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ ಗೀತಾ ದೊಪ್ಪ, ಸಮುದಾಯ ವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ ದಿನೇಶ್ ಪಿ ವಿ, ಸಮುದಾಯ ವೈದ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ ಅಪೂರ್ವ ದೊರೆ ಸ್ತನ್ಯಪಾನದ ಪ್ರಾಮುಖ್ಯತೆ ಮತ್ತು ಪ್ರಯೋಜನಗಳ ಕುರಿತು ಆರೋಗ್ಯ ಮಾಹಿತಿಗಳನ್ನು ವಿವರಿಸಿದರು.
ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಾದ ಡಾ ಸಿಂದು, ಡಾ ಸುನಿಧಿ ಎಸ್ ನಾಯಕ್ ಹಾಗೂ ಡಾ ರಾಜಸುಧರ್ಶನ್ ವಿಶ್ವ ಸ್ತನ್ಯಪಾನ ಸಪ್ತಾಹ ದಿನದ ಇತಿಹಾಸ ಮಹತ್ವ, ಹಾಲುಣಿಸುವ ತಂತ್ರ ಹಾಗೂ ಸರ್ಕಾರದಿಂದ ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ದೊರೆಯುವ ಸವಲತ್ತುಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಬಳಿಕ ಪೀಡಿಯಾಟ್ರಿಕ್ಸ್ ವಿಭಾಗದ ಪ್ರಾಧ್ಯಾಪಕರಾದ ಡಾ.ಪ್ರಸಾದ್ ನಾಯಕ್ ಸ್ತನ್ಯಪಾನದ ಜಾಗೃತಿಯ ಬಗ್ಗೆ ಪ್ರಮಾಣವಚನ ವಾಚಿಸಿದರು.
ಕೆವಿಜಿ ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳಿಂದ ಸ್ತನ್ಯ ಪಾನ ಜಾಗೃತಿ ಮೂಡಿಸುವ ಸಲುವಾಗಿ ವಿಶೇಷ ಮೂಕಪಾತ್ರ ಅಭಿನಯ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಹಾಗೂ ಸ್ಪರ್ಧಾ ವಿಜೇತರಿಗೆ ಈ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸ್ಪರ್ಧೆಗಳ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಡಾ ಗ್ರೀಷ್ಮಾ ಪ್ರಾರ್ಥಿಸಿದರು, ಡಾ ಪ್ರಸಾದ್ ನಾಯಕ್ ವಂದನಾರ್ಪಣೆಗೈದರು, ಡಾ ಮಿನಿ ಕಾರ್ಯಕ್ರಮ ನಿರೂಪಿಸಿದರು, ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ತಾಯಂದಿರು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
Click