ನ್ಯೂಸ್ ನಾಟೌಟ್: ಯುಪಿಯ ಬರೇಲಿ ಜಿಲ್ಲೆಯಲ್ಲಿ ಒಂಬತ್ತು ಮಹಿಳೆಯರನ್ನು ಕೊಲೆಗೈದ ಸೀರಿಯಲ್ ಕಿಲ್ಲರ್ ಕೊನೆಗೂ ಸೆರೆಯಾಗಿದ್ದಾನೆ. ಒಂದು ವರ್ಷದ ಕಠಿಣ ತನಿಖೆ, 22 ಪೊಲೀಸ್ ತಂಡಗಳು, 150 ಕ್ಕೂ ಹೆಚ್ಚು ಶೋಧ ಕಾರ್ಯಾಚರಣೆ, 1.5 ಲಕ್ಷ ಮೊಬೈಲ್ ಫೋನ್ ಸಂಖ್ಯೆಗಳ ಪರಿಶೀಲನೆ, 24 ಗಂಟೆಗಳ ವಾರ್ ರೂಮ್.. “ಸರಣಿ ಕೊಲೆಗಾರ” ನನ್ನು ಪತ್ತೆಹಚ್ಚಲು ಉತ್ತರ ಪ್ರದೇಶ ಪೊಲೀಸರು ಇಷ್ಟೆಲ್ಲಾ ಮಾಡಬೇಕಾಯಿತು.
ಎಲ್ಲಾ 9 ಮಹಿಳೆಯರನ್ನು ಒಂದೇ ರೀತಿಯಲ್ಲಿ ಕೊಲೆ ಮಾಡಲಾಗಿತ್ತು. ಸೀರೆಯನ್ನು ಅವರ ಕತ್ತಿಗೆಗೆ ಬಿಗಿದು ಹತ್ಯೆ ಮಾಡಲಾಗಿತ್ತು. ಸೀರಿಯಲ್ ಕಿಲ್ಲರ್ನ ಈ ವಿಶಿಷ್ಟ ಪ್ಯಾಟ್ರನ್ ಕೊಲೆ ರಹಸ್ಯವನ್ನು ಭೇದಿಸಲು ಸಹಾಯ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೂನ್ 2023 ಮತ್ತು ಜುಲೈ 2024 ರ ನಡುವೆ ಬರೇಲಿ ಶಾಹಿ ಮತ್ತು ಶಿಶ್ಗಢ ಪೊಲೀಸ್ ವ್ಯಾಪ್ತಿಯಲ್ಲಿ ಸುಮಾರು ಒಂಬತ್ತು ಮಹಿಳೆಯರನ್ನು ಕೊಲೆಗೈದ ಆರೋಪಿತ ಸೈಕೋ ಕಿಲ್ಲರ್ ಅನ್ನು ಬಂಧಿಸಿದ್ದೇವೆ ಎಂದು ಬರೇಲಿ ಹಿರಿಯ ಪೊಲೀಸ್ ಅಧೀಕ್ಷಕ ಅನುರಾಗ್ ಆರ್ಯ ಹೇಳಿದ್ದಾರೆ.
ಆರೋಪಿಯನ್ನು 38 ವರ್ಷದ ಕುಲದೀಪ್ ಕುಮಾರ್ ಗಂಗ್ವಾರ್ ಎಂದು ಪೊಲೀಸರು ಗುರುತಿಸಿದ್ದು, ಆತನನ್ನು ಆಗಸ್ಟ್ 8 ರಂದು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಗಂಗ್ವಾರ್ ಮಹಿಳೆಯರನ್ನು ಕೊಂದ ನಂತರ ಅವರ ವೈಯಕ್ತಿಕ ವಸ್ತುಗಳನ್ನು, ಕೊಲೆ ಮಾಡಿದ ಸಂತೋಷಕ್ಕಾಗಿ ತನ್ನ ಬಳಿ ಇಟ್ಟುಕೊಳ್ಳುತ್ತಿದ್ದ. ಮಹಿಳೆಯರಿಗೆ ಸೇರಿದ ಗುರುತಿನ ಚೀಟಿಗಳು, ಬಿಂದಿಗಳು ಮತ್ತು ಲಿಪ್ಸ್ಟಿಕ್ಗಳು ಆರೋಪಿ ಬಳಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಟ್ಟ ಬಾಲ್ಯವೇ ಅವನನ್ನು ಸ್ತ್ರೀ ದ್ವೇಷಿ ಆಗಿಸಿತ್ತು ಎಂದು ತನಿಖೆ ವೇಳೆ ಗಂಗ್ವಾರ್ ಬಾಯ್ಬಿಟ್ಟಿದ್ದಾನೆ. ಆತನ ತಂದೆ 2ನೇ ಮದುವೆಯಾದ ಬಳಿಕ ಮಲತಾಯಿ ಯಾವಾಗಲು ಗಂಗ್ವಾರ್ ನ ಹೊಡೆಯುತ್ತಿದ್ದಳಂತೆ. ಮುಂದೆ ಮದುವೆಯಾದ ಪತ್ನಿ ಕೂಡ ಈತನನ್ನು ಬಿಟ್ಟ ಹೋದ ಮೇಲೆ ವ್ಯಸನಕ್ಕೆ ಬಿದ್ದಿದ್ದ. ಆತನಿಗೆ ಮಲತಾಯಿ ಸೇರಿದಂತೆ ಹೆಂಗಸರು ಅಂದ್ರೆ ದ್ವೇಷ ಬೆಳೆದು ನಿಂತಿತ್ತು. ಮಹಿಳೆಯರನ್ನು ಕಂಡರೆ ದ್ವೇಷ, ಕೋಪದಿಂದ ಕುದಿಯುತ್ತಿದ್ದ. ಹಾಗಾಗಿ ಒಬ್ಬೊಬ್ಬರೇ ಮಹಿಳೆಯರನ್ನು ಕಡಿಮೆ ಮಾಡಬೇಕು ಎಂದು ಮಹಿಳೆಯದ ಕೊಲೆಗೆ ಇಳಿದಿದ್ದ. ಅಮಾಯಕ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡುತ್ತಿದ್ದ.
ಹೊಲಗಳಲ್ಲಿ ಮತ್ತು ಕಾಡಿನಲ್ಲಿ ಏಕಾಂಗಿಯಾಗಿ ಕಂಡು ಬಂದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಲೈಂಗಿಕವಾಗಿ ವರ್ತಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯರು ಪ್ರತಿರೋಧ ತೋರಿದರೆ ಹಿಂಸಾಚಾರ ಮಾಡಿ ಕತ್ತು ಹಿಸುಕಿ ಸಾಯಿಸುತ್ತಿದ್ದ. ಕೊಲೆಗಾರನ ಮಾದರಿಯನ್ನು ಅರ್ಥಮಾಡಿಕೊಳ್ಳಲು ಪೊಲೀಸರು ತನಿಖೆಯ ಸಮಯದಲ್ಲಿ ಕ್ಲಿನಿಕಲ್ ಸೈಕಾಲಜಿಸ್ಟ್ಗಳನ್ನು ಸಂಪರ್ಕಿಸಿದ್ದಾರೆ. ಆರೋಪಿಯನ್ನು ಮಾನಸಿಕ ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಇತ್ತೀಚೆಗೆ ಬಹುತೇಕ ಪ್ರಕರಣಗಳನ್ನು ಪೊಲೀಸರು ಫೋನ್ ಲೊಕೇಶನ್ ಬಳಸಿ ಪತ್ತೆಹಚ್ಚುತ್ತಾರೆ. ಆದರೆ ಗಂಗ್ವಾರ್ ಎಂದಿಗೂ ಸೆಲ್ಫೋನ್ ಅಥವಾ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರಲಿಲ್ಲ. ಇನ್ನು “ನಾನು ಕೊಲ್ಲಲು ಹೊರಟಾಗ, ಯಾರೂ ಸುತ್ತಲೂ ಇಲ್ಲ ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ. ಯಾರಾದರೂ ನನ್ನನ್ನು ನೋಡಿದ್ದರೆ, ನಾನು ಆ ದಿನ ಕೊಲ್ಲುತ್ತಿರಲಿಲ್ಲ” ಎಂದು ಗಂಗ್ವಾರ್ ವಿಚಾರಣೆಯ ಸಮಯದಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ. ಮಹಿಳೆಯರನ್ನು ಕತ್ತು ಹಿಸುಕಿ ಕೊಂದ ನಂತರ ಅವರ ಕುತ್ತಿಗೆಗೆ ಏಕೆ ಗಂಟು ಕಟ್ಟಿದ್ದೀರಿ ಎಂದು ಕೇಳಿದಾಗ, ಅಪ್ಪಿತಪ್ಪಿ ಕೂಡ ಅವರು ಬದುಕಬಾರದು ಎಂದು ಹೇಳಿದ್ದಾನೆ.