ನ್ಯೂಸ್ ನಾಟೌಟ್: ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರಿಗೆ ತನ್ನ ಮೊಬೈಲ್ನಲ್ಲಿ ಅಶ್ಲೀಲ ವಿಡಿಯೊ ತೋರಿಸುತ್ತಿದ್ದ ಶಿಕ್ಷಕನನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಭಿವಂಡಿಯದಲ್ಲಿ ನಡೆದಿದೆ.
ಬಂಧಿತ ಶಿಕ್ಷಕನನ್ನು ಮುಜಾಮ್ಮಿಲ್ ಎಂದು ಗುರುತಿಸಲಾಗಿದೆ. ಶಿಕ್ಷಕನ ದುಷ್ಕೃತ್ಯದ ಬಗ್ಗೆ ಬಾಲಕಿಯೊಬ್ಬರು ತನ್ನ ಪೋಷಕರಿಗೆ ತಿಳಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
7ನೇ ತರಗತಿಯ ವಿದ್ಯಾರ್ಥಿನಿಯೊಬ್ಬರು ನಿತ್ಯ ಶಾಲೆಗೆ ವಿಳಂಬವಾಗಿ ಹೋಗುತ್ತಿದ್ದ ಬಗ್ಗೆ ಮುಖ್ಯೋಪಾಧ್ಯಾಯರು ಪೋಷಕರನ್ನು ಕರೆಸಿ ಬಾಲಕಿಯನ್ನು ಪ್ರಶ್ನಿಸಿದ್ದಾರೆ.
ಆ ಸಂದರ್ಭ ಶಿಕ್ಷಕನ ದುಷ್ಕೃತ್ಯದ ಬಗ್ಗೆ ಹೇಳಲು ಹಿಂದೇಟು ಹಾಕಿದ ಬಾಲಕಿ, ಮನೆಗೆ ತೆರಳಿ ಎಲ್ಲ ವಿಷಯವನ್ನು ಪೋಷಕರಿಗೆ ತಿಳಿಸಿದ್ದಾಳೆ. ಶಿಕ್ಷಕನು ನನಗೆ ಅಶ್ಲೀಲ ವಿಡಿಯೋ ತೋರಿಸಿ, ದುರ್ವರ್ತನೆ ಮಾಡಿದ್ದಾನೆ. ಆಗಿನಿಂದ ನನಗೆ ಶಾಲೆಗೆ ಹೋಗಬೇಕೆನಿಸುತ್ತಿಲ್ಲ ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ. ಶಿಕ್ಷಕನು ಅದೇ ರೀತಿ ಇತರೆ ವಿದ್ಯಾರ್ಥಿನಿಯರಿಗೂ ಮಾಡಿದ್ದಾನೆ ಎಂದು ಬಾಲಕಿ ತಿಳಿಸಿರುವುದಾಗಿ ಶಾಂತಿನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ವಿನಾಯಕ್ ಗಾಯಕ್ವಾಡ್ ಹೇಳಿದ್ದಾರೆ.
ಬಳಿಕ, ಬಾಲಕಿಯ ಪೋಷಕರ ದೂರು ಆಧರಿಸಿ ಶಿಕ್ಷಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 74 ಮತ್ತು 351(ಬೆದರಿಕೆ), ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ಬಳಿಕ ಆತನನ್ನು ಬಂಧಿಸಲಾಗಿದೆ.
Click