ದೇವರ ಯಾತ್ರೆ ವೇಳೆ ಡಿಜೆ ವಾಹನಕ್ಕೆ ವಿದ್ಯುತ್ ಸ್ಪರ್ಶ..! 9 ಮಂದಿ ಸಾವು, 2 ಮಂದಿ ಗಂಭೀರ..!

ನ್ಯೂಸ್‌ ನಾಟೌಟ್‌: ಕನ್ವರ್ ಯಾತ್ರೆ ವೇಳೆ ಡಿಜೆ ವಾಹನಕ್ಕೆ ಹೈಟೆನ್ಷನ್ ತಂತಿ ತಗುಲಿದ ಪರಿಣಾಮ ಕರೆಂಟ್ ಶಾಕ್ ಹೊಡೆದು 9 ಮಂದಿ ಕನ್ವರ್ ಯಾತ್ರಿಗಳು ಸಾವನ್ನಪ್ಪಿದ ಘಟನೆ ಬಿಹಾರದ ವೈಶಾಲಿಯಲ್ಲಿ ಭಾನುವಾರ(ಆ.4) ನಡೆದಿದೆ. ಕನ್ವರಿಯಾಗಳು ಅಥವಾ ಶಿವಭಕ್ತರು ಶ್ರಾವಣ ಮಾಸದಲ್ಲಿ ದೇವರಿಗೆ ಅರ್ಪಿಸಲು ತಮ್ಮ ಊರಿನಿಂದ ಗಂಗಾಜಲವನ್ನು ಒಯ್ಯುತ್ತಾರೆ. ಕನ್ವರ್ ಯಾತ್ರೆಯು ಪ್ರತಿ ವರ್ಷ ನಡೆಯುವ ಅತಿ ದೊಡ್ಡ ಧಾರ್ಮಿಕ ಯಾತ್ರೆಗಳಲ್ಲಿ ಒಂದಾಗಿದೆ.ಹಾಜಿಪುರ ಕೈಗಾರಿಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಲ್ತಾನ್‌ ಪುರ ಗ್ರಾಮದ ಯುವಕರನ್ನು ಒಳಗೊಂಡ ತಂಡವು ಸೋನ್‌ಪುರ ಬಾಬಾ ಹರಿಹರನಾಥದಲ್ಲಿ ‘ಜಲಾಭಿಷೇಕ’ ಮಾಡಲು ಗಂಗಾಜಲವನ್ನು ಹೊತ್ತು ಸರನ್‌ನ ಪಹೇಲಜಾ ಘಾಟ್‌ ಗೆ ತೆರಳುತ್ತಿತ್ತು. ಈ ವೇಳೆ ಡಿಜೆ ಹಾಡುಗಳೊಂದಿಗೆ ಮೆರವಣಿಗೆ ತೆರಳುತ್ತಿದ್ದ ವೇಳೆ 11,000 ವೋಲ್ಟ್ ಹೈಟೆನ್ಷನ್ ತಂತಿಗೆ ಡಿಜೆ ವಾಹನದ ಮೇಲ್ಭಾಗ ತಾಗಿ ದುರಂತ ಸಂಭವಿಸಿದೆ. ಕನ್ವರಿಯಾಗಳು ಅಥವಾ ಶಿವಭಕ್ತರು ಡಿಜೆ ವಾಹನದಲ್ಲಿ ತೆರಳುತ್ತಿದ್ದರು. ವಾಹನ ತುಂಬಾ ಎತ್ತರವಾಗಿದ್ದರಿಂದ ಹೈಟೆನ್ಷನ್ ತಂತಿಗೆ ಸಿಕ್ಕಿಹಾಕಿಕೊಂಡು ಘಟನೆ ಸಂಭವಿಸಿದೆ. ಘಟನೆಯಲ್ಲಿ ಆರು ಮಂದಿಗೆ ಗಾಯಗಳಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರು ಹಾಜಿಪುರದ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.