ನ್ಯೂಸ್ ನಾಟೌಟ್: ಹಿಂದಿನ ತಲೆಮಾರಿನ ಆಚರಣೆಗಳು ವಿಭಿನ್ನವಾಗಿದ್ದವು. ಆಟಿ ತಿಂಗಳ ಮಹತ್ವವನ್ನು ಆಟಿ ಉತ್ಸವದ ಮೂಲಕ ಇಂದಿನ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿದ ಎನ್ಎಂಸಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಪ್ರಯತ್ನ ಶ್ಲಾಘನೀಯ ಎಂದು ಎನ್ನೆಂಸಿಯ ಗೌರವ ಪ್ರಾಂಶುಪಾಲರು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ) ಸಲಹೆಗಾರ ಪ್ರೊ.ಕೆ.ವಿ. ದಾಮೋದರ ಗೌಡ ಹೇಳಿದರು.
ಸುಳ್ಯದ ಪ್ರತಿಷ್ಠಿತ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಂಗಳವಾರ (ಆಗಸ್ಟ್ 13) ಸಂಭ್ರಮದ ಆಟಿ ಉತ್ಸವವನ್ನು ಸಾಂಪ್ರದಾಯಿಕ ರೀತಿಯಲ್ಲಿ ಚೆನ್ನೆಮಣೆ ಆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಉಪಾಧ್ಯಕ್ಷೆ ಶೋಭಾ ಚಿದಾನಂದ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಎಒಎಲ್ಇ (ರಿ) ಕಾರ್ಯದರ್ಶಿ ಹೇಮನಾಥ್ ಕೆ.ವಿ. ಮಾತನಾಡಿ, ಆಟಿ ತಿಂಗಳ ಪದ್ಧತಿಗಳನ್ನು ವಿವರಿಸಿ ಕಷ್ಟದ ತಿಂಗಳಾದ ಆಟಿ ತಿಂಗಳನ್ನು ಉತ್ಸವವೆಂಬಂತೆ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳು ಆಷಾಡ ಮಾಸದ ಈ ಉತ್ಸವದಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿದ್ದೀರಿ. ಈ ಮೂಲಕ ನಮ್ಮ ಹಿರಿಯರ ಕಾಲದ ಸಂಸ್ಕೃತಿಯನ್ನು ಸಾರುವ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಒಎಲ್ಇ (ರಿ) ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ., ಸದಸ್ಯರಾದ ಜಗದೀಶ್ ಅಡ್ತಲೆ, ಎನ್ನೆಂಪಿಯು ಪ್ರಾಂಶುಪಾಲೆ ಮಿಥಾಲಿ ರೈ ಕೆ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್, ರಿಜಿಸ್ಟ್ರಾರ್ ಸಂದೇಶ್ ರೈ, ಎನ್ನೆಂಸಿ ಪ್ರಾಂಶುಪಾಲರಾದ ರುದ್ರಕುಮಾರ್ ಎಂ.ಎಂ. ಆಗಮಿಸಿ ಆಟಿ ಉತ್ಸವದ ವಸ್ತು ಪ್ರದರ್ಶನದಲ್ಲಿ ಹಿಂದಿನ ಹಳೇ ಕಾಲದ ವಸ್ತುಗಳು, ನೃತ್ಯ, ಹಾಡು ಆಹಾರ ವೈವಿಧ್ಯ ಮೊದಲಾದ ಕಲಾ ಪ್ರಕಾರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜಿನ ವಿದ್ಯಾರ್ಥಿಗಳನ್ನು ನಾಲ್ಕು ತಂಡಗಳನ್ನಾಗಿ ಮಾಡಿ ಸ್ಪರ್ಧೆ ಆಯೋಜಿಸಲಾಗಿತ್ತು. ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಹಾಗು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.