ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟೆಂಬರ್ 2 ರಂದು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದ್ದು, ಈ ಪ್ರಯುಕ್ತ ಆಮಂತ್ರಣ ಪತ್ರ ಹಾಗೂ ಕರಪತ್ರ ಬಿಡುಗಡೆ ಕಾರ್ಯಕ್ರಮ ಶನಿವಾರ (ಆ.24) ಕಾಲೇಜಿನಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ. ಹಾಗೂ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ಆಮಂತ್ರಣ ಪತ್ರ ಹಾಗೂ ಕರಪತ್ರ ಬಿಡುಗಡೆಗೊಳಿಸಿದರು. ಬಂಟಮಲೆ ಅಕಾಡೆಮಿಯ ಅಧ್ಯಕ್ಷ ಹಿಮಕರ ಎ.ಕೆ., ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ. ವಿಚಾರ ಸಂಕಿರಣದ ಸಂಯೋಜಕಿ ಡಾ. ಅನುರಾಧಾ ಕುರುಂಜಿ, ಸಹ ಸಂಯೋಜಕರಾದ ಸಂಜೀವ ಕುದ್ಪಾಜೆ, ಡಾ. ಮಮತಾ ಕೆ, ಲತೀಶ್ ಕುಮಾರ್ ಕೆ. ಹಾಗೂ ಕಚೇರಿ ಸಿಬ್ಬಂದಿ ಪವನ್ ಉಪಸ್ಥಿತರಿದ್ದರು.
ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗ, ಕನ್ನಡ ಸಂಘ, ಇತಿಹಾಸ ವಿಭಾಗ ಐಕ್ಯೂಎಸಿ ಆಶ್ರಯದಲ್ಲಿ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ ಇದರ ಮನೆ ಮನೆಗೆ ಕನ್ನಡ ಪುಸ್ತಕ ಅಭಿಯಾನದಡಿಯಲ್ಲಿ ಬಂಟಮಲೆ ಅಕಾಡೆಮಿ ಸಹಭಾಗಿತ್ವದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಅಮರ ಸುಳ್ಯ ಸಂಗ್ರಾಮ 1837 (ಡಾ.ವಿಜಯ್ ಪೂಣಚ್ಚ ತಂಬಂಡ ಅವರ ಕೃತಿ ಆಧಾರಿತ ವಿಚಾರ ಸಂಕಿರಣ) ಇದರ ರಾಷ್ಟ್ರೀಯ ವಿಚಾರ ಸಂಕಿರಣ 2024 ಇದಾಗಿದ್ದು, ಸೆ.2ರಂದು ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಎನ್.ಎಂ.ಸಿ. ಪ್ರಾಂಶುಪಾಲ ಡಾ| ರುದ್ರಕುಮಾರ್ ಎಂ.ಎಂ. ತಿಳಿಸಿದ್ದಾರೆ.
ಬೆಳಗ್ಗೆ ಗಂಟೆ 10ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಹಂಪಿ ಕನ್ನಡ ವಿವಿ ಕುಲಪತಿ ಡಾ| ಡಿ.ವಿ. ಪರಮಶಿವಮೂರ್ತಿ ಉದ್ಘಾಟಿಸಲಿದ್ದಾರೆ. ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಪುರುಷೋತ್ತಮ ಬಿಳಿಮಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಗಂಟೆ 12ರಿಂದ ಪ್ರಬಂಧ ಮಂಡನೆ ನಡೆಯಲಿದೆ. ಎಂಟು ಶತಮಾನಗಳ ಕಾಲ ಕೊಡಗನ್ನು ಆಳಿದ ಚಂಗಾಳ್ವರು ಮತ್ತು ಕೊಂಗಾಳ್ವರು – ಲಿಂಗಾಯರ ಅರಸರ ಆರಂಭಿಕ ಕಾಲಘಟ್ಟ ವಿಷದಲ್ಲಿ ಚಿತ್ರದುರ್ಗಾ ವಾಣಿವಿಲಾಸಪುರ ಸ.ಪ.ಪೂ.ಕಾಲೇಜಿನ ಅತಿಥಿ ಉಪನ್ಯಾಸಕ ಡಾ.ಜಗದೀಶ್ ಜಿ.ವಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಹೈದರ್ – ಟಿಪ್ಪು ಮತ್ತು ದೊಡ್ಡವೀರರಾಜೇಂದ್ರನ ಸಂಘರ್ಷಗಳು: ಮತಾಂತರ ರಾಜಕಾರಣ ವಿಷಯದ ಬಗ್ಗೆ ಬೆಂಗಳೂರಿನ ಇತಿಹಾಸ ಉಪನ್ಯಾಸಕ ಡಾ.ಹಂ.ಗು.ರಾಜೇಶ ಗೋಷ್ಠಿ ನಡೆಸಿಕೊಡಲಿದ್ದಾರೆ. ಅಪರಾಹ್ನ 2ರಿಂದ ಲಿಂಗರಾಜೇಂದ್ರ ಒಡೆಯರ್; ಅರಮನೆ ರಾಜಕೀಯ ಮತ್ತು ಹುಕುಂನಾಮೆಗಳು ವಿಷಯದ ಬಗ್ಗೆ ಮಡಿಕೇರಿ ಅಲ್ಲಾರಂಡ ರಂಗ ಚಾವಡಿ ಅಧ್ಯಕ್ಷ ಅಲ್ಲಾರಂಡ ವಿಠ್ಠಲ ನಂಜಪ್ಪ ಮಾತನಾಡಲಿದ್ದಾರೆ.
ಚಿಕ್ಕವೀರರಾಜೇಂದ್ರ ಒಡೆಯರ್ ಮತ್ತು ಪ್ರಧಾನ ದಿವಾನ ಬಸವಯ್ಯ ಸಾಮಾಜಿಕ ಸಂಘರ್ಷದ ಪರಮಾವಧಿ ಮತ್ತು ಗ್ರೇಟ್ ವಾರ್ ಆಫ್ 1834 ಎಗೇನೆಸ್ಟ್ ಬ್ರಿಟಿಷ್ ವಿಷಯದ ಬಗ್ಗೆ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಹಿರಿಯ ಪ್ರಾಧ್ಯಾಪಕ ಡಾ.ಬಿ.ಎಂ.ಪುಟ್ಟಯ್ಯ ಗೋಷ್ಠಿ ನಡೆಸಿಕೊಡಲಿದ್ದಾರೆ.
ಅಪರಾಹ್ನ 3ಕ್ಕೆ 1837ರ ಅಮರ ಸುಳ್ಯ ಸಂಗ್ರಾಮ ಮತ್ತು ಪರಿಣಾಮಗಳು ವಿಷಯದ ಬಗ್ಗೆ ಸಂಶೋಧಕ ಕೆ.ಆರ್.ವಿದ್ಯಾಧರ ಹಾಗೂ ಅಮರ ಸುಳ್ಯ ಸಂಗ್ರಾಮ 1837: ಚರಿತ್ರೆ ರಚನೆ ಮತ್ತು ವಿಧಾನ ಕ್ರಮಗಳು ವಿಷಯದ ಬಗ್ಗೆ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ.ಪ್ರದೀಪ ಕೆಂಚನೂರು ಗೋಷ್ಠಿ ನಡೆಸಿಕೊಡಲಿದ್ದಾರೆ. ಸಂಜೆ 4ರಿಂದ 4.30ರ ವರೆಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. 4.30ರಿಂದ ಸಮಾರೋಪ ಸಮಾರಂಭ ನಡೆಯಲಿದೆ.