(ಲೇಖನ ಸಂಗ್ರಹ, ವರದಿ ವಿಶ್ಲೇಷಣೆ: ಹರ್ಷಿತಾ ವಿನಯ್)
ಕ್ಯಾನ್ಸರ್ ಎಂಬುದು ಯಾವುದೇ ಜೀವಕೋಶಗಳ ಅಸಹಜ ಹಾಗು ಅನಿಯಂತ್ರಿತ ವಿಭಜನೆ ಮತ್ತು ಬೆಳವಣಿಗೆಯ ಸ್ಥಿತಿಯಾಗಿದೆ. ಶ್ವಾಸಕೋಶದ ಕ್ಯಾನ್ಸರ್ ವಿಶ್ವದಲ್ಲಿಯೇ ರೋಗಪೀಡಿತರ ಸಂಖ್ಯೆಯಲ್ಲಿ ಎರಡನೇ ಸ್ಥಾನ ಹಾಗು ಮರಣ-ಪ್ರಮಾಣದಲ್ಲಿ ಪ್ರಥಮ ಸ್ಥಾನ ಹೊಂದಿದೆ.
ಭಾರತದಲ್ಲಿ ಪ್ರತೀವರ್ಷ ಅಂದಾಜು 65,000 ಜನರು ಈ ಕ್ಯಾನ್ಸರ್ ಗೆ ತುತ್ತಾಗುತ್ತಾರೆ. ಇನ್ನೊಂದು ರೀತಿಯಲ್ಲಿ ಹೇಳುವುದೆಂದರೆ ಭಾರತದಲ್ಲಿನ ಎಲ್ಲಾ ಹೊಸ ಕ್ಯಾನ್ಸರ್ ಪ್ರಕರಣಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಶೇಕಡಾ 5.9 ರಷ್ಟಿದೆ. ವಾರ್ಷಿಕವಾಗಿ ಈ ಸಂಖ್ಯೆಯು ಹೆಚ್ಚುತ್ತಲೇ ಇರುವುದು ಇನ್ನೂ ಕಳವಳಕಾರಿಯಾದ ವಿಷಯ. ಶ್ವಾಸಕೋಶಗಳ ಶ್ವಾಸನಾಳಿಕೆಗಳನ್ನು ಆವರಿಸಿರುವ ಅಂಗಾಂಶದಲ್ಲಿನ DNAಯಲ್ಲಿ ಧೂಮಪಾನ ಮುಂತಾದ ಹಾನಿಕಾರಕ ಅಂಶಗಳಿಂದಾಗಿ ಸಂಚಿತ ಬದಲಾವಣೆ ಉಂಟಾಗುವುದರಿಂದ ಈ ಜೀವಕೋಶಗಳು ಅನಿಯಮಿತವಾಗಿ ಅಸಹಜವಾಗಿ ಬೆಳವಣಿಗೆ ಕಾಣುತ್ತದೆ. ಇದುವೇ ಮುಂದೆ ಬೆಳೆದು ಕಾನ್ಸರ್ ರೋಗವಾಗುತ್ತದೆ.
ಶ್ವಾಸಕೋಶದ ಕಾನ್ಸರ್ ಗೆ ಪ್ರಮುಖ ಕಾರಣಗಳೆಂದರೆ ಉಸಿರಾಟದಲ್ಲಿ ನಾವು ಒಳತೆಗೆದುಕೊಳ್ಳುವ ಹಾನಿಕಾರಕ ರಾಸಾಯನಿಕ ಪದಾರ್ಥಗಳು. ಧೂಮಪಾನವು, ಅದರಲ್ಲೂ ನಿರ್ದಿಷ್ಟವಾಗಿ ಸಿಗರೇಟುಗಳನ್ನು ಸೇದುವ ಅಭ್ಯಾಸವು, ನಿಸ್ಸಂಶಯವಾಗಿ ಶ್ವಾಸಕೋಶದ ಕ್ಯಾನ್ಸರ್ಗೆ ಮುಖ್ಯ ಕಾರಣ. ಸಿಗರೇಟಿನ ಹೊಗೆಯಲ್ಲಿ ಇರುವ 5000ಕ್ಕೂ ಅಧಿಕ ರಾಸಾಯನಿಕ ಪದಾರ್ಥಗಳಲ್ಲಿ 60ಕ್ಕೂ ಹೆಚ್ಚಿನ ಕ್ಯಾನ್ಸರ್ ಜನಕ ಅಂಶಗಳನ್ನು ಒಳಗೊಂಡಿರುತ್ತದೆ. ಎಲ್ಲ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳಲ್ಲಿ 80 ರಿಂದ 90 ಪ್ರತಿಶತದಷ್ಟು ಧೂಮಪಾನದಿಂದಾಗಿ ಉಂಟಾಗುತ್ತದೆ. ಧೂಮಪಾನದ ಪ್ರಮಾಣ ಹಾಗು ಧೂಮಪಾನ ಮಾಡಿರುವ ಅವಧಿಯು ಜಾಸ್ತಿಯಾದಷ್ಟು ಈ ಕಾನ್ಸರ್ ಗೆ ತುತ್ತಾಗುವ ಸಾಧ್ಯತೆಗಳು ಜಾಸ್ತಿಯಾಗುತ್ತಾ ಹೋಗುತ್ತದೆ. ಹಾಗೆಂದು ಶ್ವಾಸಕೋಶದ ಕಾನ್ಸರ್ ಗೆ ಧೂಮಪಾನವೊಂದೇ ಕಾರಣವೆಂದೇನಲ್ಲ. 10–15% ನಷ್ಟು ರೋಗಿಗಳು ಎಂದಿಗೂ ಧೂಮಪಾನ ಮಾಡದವರಾಗಿರುತ್ತಾರೆ. ಯಾವುದೇ ರೀತಿಯ ನಿಷ್ಕ್ರಿಯ ಧೂಮಪಾನ (Passive Smoking) (ಮತ್ತೋರ್ವರು ಮಾಡುವ ಧೂಮಪಾನದಿಂದ ಹೊರಬಿಡಲ್ಪಟ್ಟ ಹೊಗೆಯ ಒಳಗೆಳೆದುಕೊಳ್ಳುವಿಕೆ) ಕೂಡ ಶ್ವಾಸಕೋಶದ ಕಾನ್ಸರ್ ಗೆ ಕಾರಣವಾಗುವ ಇನ್ನೊಂದು ಮುಖ್ಯವಾದ ಅಂಶ.
ವಾಹನಗಳು, ಕಾರ್ಖಾನೆಗಳು, ಮತ್ತು ವಿದ್ಯುತ್ ಸ್ಥಾವರಗಳಿಂದ ಹೊರಹೊಮ್ಮುವ ಮಾಲಿನ್ಯಕಾರಕ ಉತ್ಸರ್ಜನಗಳು, ರೇಡಾನ್ ಅನಿಲ, ಕಲ್ನಾರು ಮುಂತಾದ ಹಾನಿಕಾರಕ ಪದಾರ್ಥಗಳ ಒಡ್ಡುವಿಕೆ ಕೂಡ ಈ ಕ್ಯಾನ್ಸರ್ ಗೆ ಕಾರಣವಾಗಿರುತ್ತದೆ. ಹಾಗೆಯೇ, ಮಾನವ ಪ್ಯಾಪಿಲ್ಲೋಮಾ ವೈರಾಣು (Human Papilloma Virus), JC Virus, Simian Virus, Cytomegalovirus ಮುಂತಾದ ವೈರಾಣುಗಳಿಂದಾಗಿಯೂ ಶ್ವಾಸಕೋಶದ ಕಾನ್ಸರ್ ಉಂಟಾಗುವುದನ್ನು ಕಾಣಲಾಗಿದೆ. ಶ್ವಾಸಕೋಶದ ಬೇರೆ ದೀರ್ಘಕಾಲದ ರೋಗಗಳಾದ ಕ್ಷಯ ರೋಗ, ದಮ್ಮಿನ ಖಾಯಿಲೆ ಮುಂತಾದವು ಇರುವವರಲ್ಲಿ ಕಾನ್ಸರ್ ಗೆ ತುತ್ತಾಗುವ ಸಾಧ್ಯತೆಯೂ ಹೆಚ್ಚಿರುವುದಾಗಿ ಕಂಡುಬಂದಿರುತ್ತದೆ.
ಶ್ವಾಸಕೋಶದಲ್ಲಿ ಎಲ್ಲಿ ಬೇಕಾದರೂ ಗೆಡ್ಡೆಗಳು ಪ್ರಾರಂಭವಾಗಬಹುದು, ಆದರೆ ರೋಗವು ಮುಂದುವರಿದ ಹಂತವನ್ನು ತಲುಪುವವರೆಗೆ ಅಥವಾ ದೇಹದ ಇನ್ನೊಂದು ಭಾಗಕ್ಕೆ ಹರಡುವವರೆಗೆ ರೋಗಲಕ್ಷಣಗಳು ಸಾಮಾನ್ಯವಾಗಿ ಕಂಡುಬರುವುದಿಲ್ಲ. ಶ್ವಾಸಕೋಶದ ಕಾನ್ಸರ್ ಇರುವವರಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳೆಂದರೆ (ಸುಲಭವಾಗಿ ವಾಸಿಯಾಗದ) ನಿರಂತರ ಕೆಮ್ಮು, ಕಫ, ಕೆಮ್ಮಿದಾಗ ಕಫದೊಂದಿಗೆ ರಕ್ತ ಬರುವುದು, ತಳಮಟ್ಟದ ಜ್ವರ, ಎದೆ ನೋವು, ತೂಕದಲ್ಲಿ ಇಳಿಕೆಯಾಗುವುದು, ಹಸಿವಾಗದಿರುವುದು, ನಿತ್ರಾಣ ಹಾಗು ತೀವ್ರ ಬಳಲಿಕೆ ಮುಂತಾದ ಅನಿರ್ದಿಷ್ಟ ಲಕ್ಷಣಗಳು.
ಹಾಗೆಯೇ, ರೋಗದ ಮುಂದುವರಿದ ಹಂತಗಳಲ್ಲಿ ಉಸಿರಾಟಕ್ಕೆ ತೊಂದರೆ, ಧ್ವನಿಯಲ್ಲಿ ಬದಲಾವಣೆ, ಊಟ ನುಂಗಲು ತೊಂದರೆಯಾಗುವುದು, ಕಾಮಾಲೆ, ಮೂಳೆ ನೋವುಗಳು, ಬೆನ್ನು ನೋವು ಮುಂತಾದ ಲಕ್ಷಣಗಳು ಕಾಣಿಸತೊಡಗಬಹುದು. ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೇನೆಂದರೆ 7 -10% ವ್ಯಕ್ತಿಗಳಲ್ಲಿ ರೋಗ ನಿರ್ಣಯವಾಗುವ ಹಂತದಲ್ಲಿ ಯಾವುದೇ ರೋಗ-ಲಕ್ಷಣಗಳು ಕಂಡುಬರುವುದಿಲ್ಲ. ಇವರು ಬೇರೆ ಯಾವುದೋ ಕಾರಣಕ್ಕಾಗಿ/ ವಾಡಿಕೆಯಂತೆ ಶ್ವಾಸಕೋಶದ ಪರೀಕ್ಷೆಗೆ (ಹೆಚ್ಚಾಗಿ ಕ್ಷ-ಕಿರಣ ಪರೀಕ್ಷೆ) ಒಳಪಟ್ಟಾಗ ಪ್ರಾಸಂಗಿಕವಾಗಿ ಕಾನ್ಸರ್ ಇರುವುದು ಪತ್ತೆಯಾಗಿರುತ್ತದೆ.
ಧೂಮಪಾನದ ಚಟವಿರುವವರು, ಮೊದಲು ಧೂಮಪಾನ ಮಾಡುತ್ತಿದ್ದವರು ಕಾನ್ಸರ್ ಗೆ ತುತ್ತಾಗುವ ಅಪಾಯವನ್ನು ಅತಿಹೆಚ್ಚು ಹೊಂದಿರುತ್ತಾರೆ. ಇವರಲ್ಲದೆ ಶ್ವಾಸಕೋಶದ ಬೇರೆ ದೀರ್ಘಕಾಲದ ರೋಗಗಳಾದ COPD (ದಮ್ಮು ಖಾಯಿಲೆ), ಅಸ್ತಮಾ, ಕ್ಷಯ ರೋಗ, ತಮ್ಮ ಜೀವಿತಾವಧಿಯಲ್ಲಿ ರೇಡಿಯೇಶನ್ ಅಥವಾ ಇನ್ನಿತರ ಹಾನಿಕಾರಕ ಅಂಶಗಳಿಗೆ ತುತ್ತಾದವರು, ಕಲ್ನಾರು ಅಥವಾ ಇನ್ನಿತರ ಕಾರ್ಖಾನೆಗಳಲ್ಲಿ ಉದ್ಯೋಗದಲ್ಲಿರುವವರು, ಮುಂತಾದ ಅಪಾಯಕಾರಿ ಅಂಶಗಳನ್ನು ಹೊಂದಿರುವ ವ್ಯಕ್ತಿಗಳು ನಿಯಮಿತವಾಗಿ ಆಗ್ಗಾಗೆ ವೈದ್ಯರಲ್ಲಿ ಶ್ವಾಸಕೋಶದ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.
ಹಾಗೆಯೇ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರವಾಗಿ 50 ವರ್ಷಕ್ಕೆ ಮೇಲ್ಪಟ್ಟವರೆಲ್ಲರೂ ಕೂಡ ಶ್ವಾಸಕೋಶದ ಆರೋಗ್ಯದ ಬಗ್ಗೆ ನಿಗಾವಹಿಸಬೇಕಾಗಿದೆ. ಇವರಲ್ಲಿ ನಿಯಮಿತವಾಗಿ ಎದೆಯ ಕ್ಷ-ಕಿರಣ (X-Ray) ತಪಾಸಣೆ ನಡೆಸಿ ಆರೋಗ್ಯದ ಬಗ್ಗೆ ಖಾತರಿಪಡಿಸಿಕೊಳ್ಳುವುದು ಒಳ್ಳೆಯದು. ಇದಲ್ಲದೆ, Low Dose CT (ಕಡಿಮೆ ಪ್ರಮಾಣದ ವಿಕಿರಣದ ಸ್ಕ್ಯಾನ್) ಎಂಬ ಸ್ಕ್ಯಾನ್ ನಿಂದ ರೋಗಲಕ್ಷಣಗಳು ಕಾಣಿಸುವುದಕ್ಕೆ ಮುಂಚಿತವಾಗಿ, ಯಾವುದೇ ಕಾನ್ಸರ್ ಗಂಟು ಇರುವುದರ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಹೀಗೆ ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿದಲ್ಲಿ ಶ್ವಾಸಕೋಶದ ಕಾನ್ಸರ್ ನ ಚಿಕಿತ್ಸೆ ಸುಲಭವಾಗಿರುತ್ತದೆ ಹಾಗು ಮುಂದಿನ ದಿನಗಳಲ್ಲಿನ ಆರೋಗ್ಯವು ಸುಧಾರಣೆಯತ್ತ ಸಾಗುತ್ತದೆ.
ಶ್ವಾಸಕೋಶದ ಕ್ಯಾನ್ಸರ್ ನ ಹಂತಗಳು ಮತ್ತು ಚಿಕಿತ್ಸೆ. ವೈಜ್ಞಾನಿಕವಾಗಿ ವೈದ್ಯಶಾಸ್ತ್ರದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅನ್ನು ರೋಗ ನಿರ್ಣಯಕ್ಕಾಗಿ ಹಾಗು ಮುಂದಿನ ಚಿಕಿತ್ಸೆಯನ್ನು ತೀರ್ಮಾನಿಸುವುದಕ್ಕಾಗಿ ವಿವಿಧ ಹಂತಗಳಾಗಿ ವಿಂಗಡಿಸಿ ವಿವರಿಸಲಾಗಿದೆ. ಇದಕ್ಕಾಗಿ ಕಾನ್ಸರ್ ನ ಗಾತ್ರ, ಸುತ್ತಮುತ್ತಲಿನ ಅಂಗಾಂಗಗಳ ಆಕ್ರಮಣ ಹಾಗು ಬೇರೆ ದುಗ್ಧಗ್ರಂಥಿಗಳಿಗೆ ಆಗುವ ಸ್ಥಾನಾಂತರಣಗಳು, ಹಾಗೂ ನಾಳೀಯ ಅತಿಕ್ರಮಣ, ಇತರೆ ಅಂಗಗಳಿಗೆ ಹರಡಿರುವ ವಿಸ್ತಾರವನ್ನು ಅರಿತು ರೋಗದ ಹಂತವನ್ನು ನಿರ್ಧರಿಸಲಾಗುತ್ತದೆ. ಹೀಗೆ ಹಂತವನ್ನು ಅರಿತು, ಮುಂದಿನ ಚಿಕಿತ್ಸೆ ನಿರ್ಧರಿಸುವುದಲ್ಲದೆ ರೋಗದ ಮುಂದಿನ ವೈಖರಿಯ ಮುನ್ಸೂಚನೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ.
ಖಾಯಿಲೆ ಪತ್ತೆಯಾಗಿರುವ ಎಲ್ಲ ವ್ಯಕ್ತಿಗಳಲ್ಲಿ ಐದು-ವರ್ಷ ಬದುಕುಳಿಯುವಿಕೆಯ ಪ್ರಮಾಣವು ಸುಮಾರು 15% ಇದ್ದರೆ, ನಾಲ್ಕನೇ ಹಂತದ ಕಾನ್ಸರ್ ಇರುವ ರೋಗಿಗಳ ಐದು-ವರ್ಷ ಬದುಕುಳಿಯುವಿಕೆಯ ಪ್ರಮಾಣವು 1% ನಷ್ಟಿರುತ್ತದೆ. ಶ್ವಾಸಕೋಶದ ಕಾನ್ಸರ್ ನ ಚಿಕಿತ್ಸಾ ವಿಧಾನವನ್ನು ರೋಗದ ಹಂತ, ಮತ್ತು ರೋಗಿಯ ಕಾರ್ಯಕ್ಷಮತೆಯ ಸ್ಥಿತಿ, ಹಾಗು ಊತಕಶಾಸ್ತ್ರೀಯ ಬಗೆಯ (Histological type) ನಿಂದ ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಕೀಮೋಥೆರಪಿ (Chemotherapy), ವಿಕಿರಣ ಚಿಕಿತ್ಸೆ (Radiotherapy) ಅಲ್ಲದೆ ಕೆಲವು ಆಯ್ದ ರೋಗಿಗಳಲ್ಲಿ ಶಸ್ತ್ರಕ್ರಿಯೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಕಾಯಿಲೆಯ ಹಂತ, ಒಟ್ಟಾರೆ ಆರೋಗ್ಯ, ಮತ್ತು ಇತರ ಅಂಶಗಳನ್ನು ಅವಲಂಬಿಸಿ ರೋಗಿಯ ಬದುಕುಳಿಯುವಿಕೆಯು ಅವಲಂಬಿತವಾಗಿರುತ್ತದೆ. ಈಗಿನ ವೈಜ್ಞಾನಿಕ ಬೆಳವಣಿಗೆಯಿಂದಾಗಿ ಬೇರೆ ಕಾನ್ಸರ್ ಗಳಂತೆ ಶ್ವಾಸಕೋಶದ ಕಾನ್ಸರ್ ಗೆ ಕೂಡ ಹಲವು ಪ್ರೋತ್ಸಾಹದಾಯಕ ಹಾಗು ತೃಪ್ತಿದಾಯಕ ವಿಧಾನಗಳು ಲಭ್ಯವಾಗಿವೆ. Targeted Therapy ಔಷಧಗಳು ಈಗ ಶ್ವಾಸಕೋಶದ ಕಾನ್ಸರ್ ನ ಪ್ರಮುಖ ಚಿಕಿತ್ಸಾ ವಿಧಾನವಾಗಿ ಹೊರಹೊಮ್ಮುತ್ತಿದೆ.
ಶ್ವಾಸಕೋಶದ ಕಾನ್ಸರ್ ಎಂಬುದು ಕಾನ್ಸರ್ ಗಳಲ್ಲಿಯೇ ಸಾಮಾನ್ಯವಾದ ಕಾನ್ಸರ್ ಆದರೂ ಇದರ ಬಗ್ಗೆ ಜನರಲ್ಲಿ ಅರಿವು ಕಡಿಮೆ ಹಾಗು ಇದರ ಬಗ್ಗೆ ತಿಳಿಯಲು ಹಿಂಜರಿಕೆಯೇ ಜಾಸ್ತಿ. ಯಾವುದೇ ರೋಗಕ್ಕೆ ಇದ್ದಂತೆ ಚಿಕಿತ್ಸೆಗಿಂತ ತಡೆಗಟ್ಟುವಿಕೆಯೇ ಇಲ್ಲಿಯೂ ಉತ್ತಮವಾಗಿದೆ. ಧೂಮಪಾನವನ್ನು ಮಾಡಬೇಡಿ, ಅಥವಾ ಈಗಿಂದೀಗಲೇ ನಿಲ್ಲಿಸಿ. ಧೂಮಪಾನವನ್ನು ಬಿಡುವುದರಿಂದ ನಿಮ್ಮ ಶ್ವಾಸಕೋಶದ ಜೀವಕೋಶಗಳಲ್ಲಿ ಕೂಡಲೇ ಸುಧಾರಣೆಯಾಗಲು ಪ್ರಾರಂಭವಾಗುತ್ತದೆ. ಒಂದೈದು ವರ್ಷಗಳಲ್ಲಿ ಧೂಮಪಾನದಿಂದ ಇರುವ ಕಾನ್ಸರ್ ನ ಅಪಾಯದ ಪ್ರಮಾಣವೂ ಗಮನಾರ್ಹವಾಗಿ ಕಡಿಮೆಯಾಗುತ್ತದೆಯಾದರು ಇದು ಯಾವತ್ತಿಗೂ ಧೂಮಪಾನ ಮಾಡದವರಿಂದ ಒಂದಂಶ ಹೆಚ್ಚಾಗಿಯೇ ಉಳಿಯುತ್ತದೆ. ತಂಬಾಕು ಉತ್ಪನ್ನಗಳ ಮಾರಾಟದ ನಿಯಂತ್ರಣದ ಬಗ್ಗೆ ಸರ್ಕಾರ ಹಾಗು ಇತರ ಸಂಸ್ಥೆಗಳು ಹೆಚ್ಚಿನ ಗಮನವನ್ನು ಹರಿಸಬೇಕಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನದ ನಿಷೇಧವನ್ನು ಎತ್ತಿಹಿಡಿಯುವಂತಹ ಕ್ರಮಗಳನ್ನು ಜಾರಿಗೊಳಿಸಬೇಕಾಗಿದೆ. ಹದಿಹರೆಯದವರಲ್ಲಿ ಧೂಮಪಾನದಿಂದ ಆಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಅರಿವನ್ನು ಮೂಡಿಸುವುದನ್ನು ಮೊದಲ ಆದ್ಯತೆಯನ್ನಾಗಿಸಬೇಕಿದೆ.
ಶ್ವಾಸಕೋಶದ ಕ್ಯಾನ್ಸರ್ ನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಮಟ್ಟದಲ್ಲಿ ಕಾರ್ಯಕ್ರಮಗಳು ನಡೆಯಬೇಕಿದೆ. ಈ ಶ್ವಾಸಕೋಶದ ಕಾನ್ಸರ್ ಅನ್ನು ಪ್ರಾರಂಭದ ಹಂತದಲ್ಲಿಯೇ ಪತ್ತೆ ಹಚ್ಚಿ ರೋಗನಿರ್ಣಯ ಕ್ರಮಗಳನ್ನು ಕೈಗೊಳ್ಳ ಬಹುದಾಗಿದೆ. ಹೀಗೆ ಮಾಡುವುದರಿಂದ ಶ್ವಾಸಕೋಶದ ಕಾನ್ಸರ್ ಗೆ ಇರುವ ವಿವಿಧ ರೀತಿಯ ಚಿಕಿತ್ಸೆಗಳ ಆಯ್ಕೆಯನ್ನು ಸರಿಯಾಗಿ ಪ್ರಯೋಜನ ಪಡೆದುಕೊಂಡು, ಆರೋಗ್ಯವಂತರಾಗಿ ಬದುಕುಳಿಯುವ ದಿನಗಳನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಯಾವುದೇ ಅಪಾಯಕಾರಿ ಅಂಶಗಳನ್ನು ಹೊಂದಿರುವವರು ಜಾಗೃತರಾಗಿ ನಿಯಮಿತವಾಗಿ ನಿಮ್ಮ ಶ್ವಾಸಕೋಶಗಳನ್ನು ವೈದ್ಯರಲ್ಲಿ ಪರೀಕ್ಷಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಹಾಗೆಯೇ, ಧೂಮಪಾನ ಮುಂತಾದ ಚಟಗಳನ್ನು ಈಗಿಂದೀಗಲೇ ನಿಲ್ಲಿಸಿ ನಿಮ್ಮ ಅತ್ಯಮೂಲ್ಯವಾದ ಶ್ವಾಸಕೋಶಗಳನ್ನು ರಕ್ಷಿಸಿಕೊಳ್ಳಿ.