ನ್ಯೂಸ್ ನಾಟೌಟ್: ಹಣ, ಆಸ್ತಿ, ಅಧಿಕಾರದ ಆಸೆಗೆ ಜಗತ್ತಿನಲ್ಲಿ ಮನುಷ್ಯ ಎಂತಹ ಕೀಳು ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲ ಅನ್ನುವುದು ಹಲವು ಸಲ ನಿರೂಪಿತವಾಗಿದೆ.
ಇಂದಿಗೂ ಆಸ್ತಿ, ಹಣದ ಆಸೆಗೆ ಜನರು ಮನುಷ್ಯತ್ವವನ್ನು ಕಳೆದುಕೊಂಡು ಬಹಳ ಕ್ರೂರವಾಗುತ್ತಿದ್ದಾರೆ. ಅದಕ್ಕಾಗಿ ಅವರು ತಮ್ಮವರನ್ನೇ ಕೊಲ್ಲುವ ಮಟ್ಟಕ್ಕೂ ಹೋಗುತ್ತಿದ್ದಾರೆ. ಇಂತಹ ಪ್ರಕರಣಗಳು ಹಲವು ನಡೆದಿದೆ. ಇದೀಗ ಭೂ ವಿವಾದಕ್ಕೆ ಸಂಬಂಧಿಸಿದಂತೆ 24 ವರ್ಷದ ವ್ಯಕ್ತಿಯನ್ನು ನಾಲ್ವರು ಜೀವಂತವಾಗಿ ಸಮಾಧಿ ಮಾಡಿದ್ದಾರೆ. ಬೀದಿ ನಾಯಿಗಳು ಆತನನ್ನು ರಕ್ಷಿಸಿರುವ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಸಂತ್ರಸ್ತನ ಹೆಸರು ರೂಪ್ ಕಿಶೋರ್ (24) ಎನ್ನಲಾಗಿದೆ. ಆಗ್ರಾದ ಆರ್ಟೋನಿ ಪ್ರದೇಶದಲ್ಲಿ ಜುಲೈ 18 ರಂದು ರೂಪ್ ಕಿಶೋರ್ ಮೇಲೆ ಅಂಕಿತ್, ಗೌರವ್, ಕರಣ್ ಮತ್ತು ಆಕಾಶ್ ಎಂಬ ನಾಲ್ವರು ಹಲ್ಲೆ ನಡೆಸಿದ್ದರು. ಅವರು ಅವನನ್ನು ಕತ್ತು ಹಿಸುಕಿ ನಂತರ ಅವನು ಸತ್ತಿದ್ದಾನೆಂದು ಭಾವಿಸಿ ತಮ್ಮ ಜಮೀನಿನಲ್ಲಿ ಹೂತುಹಾಕಿದ್ದಾರೆ. ಆದರೆ ಅದೃಷ್ಟವಶಾತ್ ಕಿಶೋರ್ ಅವರನ್ನು ಸಮಾಧಿ ಮಾಡಿದ ಪ್ರದೇಶವನ್ನು ಬೀದಿ ನಾಯಿಗಳು ಅಗೆದು ಅವರ ದೇಹವನ್ನು ದೇವರ ರೂಪದಲ್ಲಿ ಬಂದು ಎಳೆದಿವೆ. ಕಿಶೋರ್ ಗೆ ಪ್ರಜ್ಞೆ ಬಂದಿದೆ. ಆಗ ಅವರು ಅಲ್ಲೇ ಹತ್ತಿರದ ಪ್ರದೇಶಕ್ಕೆ ನಡೆದುಕೊಂಡು ಹೋಗಿ ಅಲ್ಲಿನ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆರೋಪಿಗಳು ತನ್ನ ಮಗನನ್ನು ಬಲವಂತವಾಗಿ ಮನೆಯಿಂದ ಕರೆದೊಯ್ದು, ಕ್ರೂರವಾಗಿ ಹಲ್ಲೆ ನಡೆಸಿ ಕತ್ತು ಹಿಸುಕಿ, ನಂತರ ತಮ್ಮ ಜಮೀನಿನಲ್ಲಿ ಹೂತುಹಾಕಿದ್ದಾರೆ ಎಂದು ಕಿಶೋರ್ ತಾಯಿ ಹೇಳಿದ್ದಾರೆ. ಈ ಬಗ್ಗೆ ಕಿಶೋರ್ ತಾಯಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಿದ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಿಸಿದ ಪೊಲೀಸರು ಆರೋಪಿಗಳ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳನ್ನು ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.