ನ್ಯೂಸ್ ನಾಟೌಟ್: ಮನುಷ್ಯ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ದಿನೇ ದಿನ ಹೆಚ್ಚುತ್ತಿದೆ. ಕರ್ತವ್ಯಕ್ಕೆ ತೆರಳಿದ್ದ ವಾಟರ್ ಮ್ಯಾನ್ ಓರ್ವನನ್ನು ಒಂಟಿಸಲಗವೊಂದು ಅಟ್ಟಾಡಿಸಿಕೊಂಡು ಬಂದ ಘಟನೆ ಸುಂಟಿಕೊಪ್ಪ ಸಮೀಪ ಕೊಡಗರಹಳ್ಳಿಯ 7ನೇ ಹೊಸಕೋಟೆ ಅಂದಗೋವೆ ಗ್ರಾಮದಲ್ಲಿ ಶನಿವಾರ (ಆ.3) ಮುಂಜಾನೆ ಸಂಭವಿಸಿದೆ.
ವಾಟರ್ ಮ್ಯಾನ್ನ ಸಮಯಪ್ರಜ್ಞೆಯಿಂದ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಕೊಡಗರಹಳ್ಳಿ ಗ್ರಾ.ಪಂ.ನ ವಾಟರ್ ಮ್ಯಾನ್ ಹುಸೇನ್ ಎಂಬವರು ಕರ್ತವ್ಯಕ್ಕೆಂದು ತೆರಳುತ್ತಿದ್ದಾಗ ಕಾಡಾನೆ ದಿಢೀರ್ ದಾಳಿ ಮಾಡಿದೆ. ಸೊಂಡಿಲಿನಿಂದ ತಳ್ಳಿದ ಪರಿಣಾಮ ಮೋರಿಯ ಪೈಪ್ ವೊಂದರ ಬಳಿ ಹುಸೇನ್ ಬಿದ್ದಿದ್ದು, ಆನೆ ಮತ್ತೆ ದಾಳಿ ಮಾಡಲು ಧಾವಿಸಿದಾಗ ಸಮಯ ಪ್ರಜ್ಞೆ ಮೆರೆದ ಹುಸೇನ್, ಮೋರಿಯ ಪೈಪ್ ನೊಳಗೆ ನುಸುಳಿಕೊಂಡಿದ್ದಾರೆ. ಆದರೂ ಬಿಡದ ಕಾಡಾನೆ ಪೈನ್ ಮೇಲೆ ದಾಳಿ ಮಾಡಿ ಹಾನಿ ಮಾಡಿದೆ. ಅದೃಷ್ಟವಶಾತ್ ಹುಸೇನ್ ಬಚವಾಗಿದ್ದಾರೆ.
ಸ್ವಲ್ಪ ಸಮಯದ ಬಳಿಕ ಕಾಡಾನೆ ತೆರಳಿದ ನಂತರ ಗ್ರಾಮಸ್ಥರು ಗಾಯಾಳು ಹುಸೇನ್ ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಒಂಟಿ ಸಲಗ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.