ನ್ಯೂಸ್ ನಾಟೌಟ್: ಕೇರಳದ ವಯನಾಡಿನಲ್ಲಿ ಭಾರೀ ಭೂಕುಸಿತ ಸಂಭವಿಸಿದ ಬಳಿಕ ಎಚ್ಚರಿಕೆ ವಹಿಸಿರುವ ಕೊಡಗು ಜಿಲ್ಲಾಡಳಿತ, ಭೂಕುಸಿತ ಸಾಧ್ಯತೆ ಇರುವ 104 ಪ್ರದೇಶಗಳನ್ನು ಗುರುತಿಸಿದೆ. ಇನ್ನೂ ಭಾರೀ ಮಳೆಯಾಗುವ ನಿರೀಕ್ಷೆ ಇರುವುದರಿಂದ ಜಿಲ್ಲಾಡಳಿತವು ಸಂಭಾವ್ಯ ಭೂಕುಸಿತದ ಪ್ರದೇಶಗಳಲ್ಲಿ ನೆಲೆಗೊಂಡಿರುವ 2,995 ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ತೆರಳಲು ನೋಟಿಸ್ ನೀಡಿದೆ.
ಈ ಹಿಂದಿನ ವಿಪತ್ತು ವರದಿಗಳು ಮತ್ತು ಸಮೀಕ್ಷೆಗಳ ಆಧಾರದ ಮೇಲೆ ಈ ಪ್ರದೇಶಗಳನ್ನು ಗುರುತಿಸಲಾಗಿದೆ. ಭಾರತೀಯ ಭೂಗರ್ಭ ಇಲಾಖೆ ಸಲ್ಲಿಸಿದ್ದ ವರದಿಯನ್ನು ಆಧರಿಸಿ ಈ ಪ್ರದೇಶಗಳನ್ನು ಗುರುತಿಸಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಸ್ಥಳಾಂತರಿಸಬೇಕಾದ ಕುಟುಂಬಗಳನ್ನು ಅಂತಿಮಗೊಳಿಸಲಾಗಿದ್ದು, ಶೀಘ್ರದಲ್ಲೇ ಸ್ಥಳಾಂತರ ಮಾಡಲು ಕಾರ್ಯಾಚರಣೆ ಕೈಗೊಂಡಿದೆ.
ಜಿಲ್ಲಾಡಳಿತ ಸದ್ಯ 14 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದೆ. ಅಲ್ಲಿ 200 ಕ್ಕೂ ಹೆಚ್ಚು ನಿವಾಸಿಗಳು ಆಶ್ರಯ ಪಡೆದಿದ್ದಾರೆ. ಅಲ್ಲದೆ, ವಿಪತ್ತಿನ ಆತಂಕ ಎದುರಿಸುತ್ತಿರುವ ಪ್ರದೇಶಗಳಲ್ಲಿ 95 ಪರಿಹಾರ ಕೇಂದ್ರಗಳನ್ನು ತೆರೆಯಲು ಸ್ಥಳಗಳನ್ನು ಗುರುತಿಸಲಾಗಿದೆ.
ಕರ್ನಾಟಕದ 1,351 ಸ್ಥಳಗಳು ಭೂಕುಸಿತಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಅಧ್ಯಯನ ವರದಿಯೊಂದು ಇತ್ತೀಚೆಗೆ ಮುನ್ಸೂಚನೆ ನೀಡಿತ್ತು. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನ ಪರಿಷತ್ ನಲ್ಲಿ ಮಾಹಿತಿ ನೀಡಿದ್ದರು.
Click