ನ್ಯೂಸ್ ನಾಟೌಟ್: ಕೇರಳದ ಅಂಗನವಾಡಿಯೊಂದರಲ್ಲಿ ಕಾಗೆಯೊಂದು ಗಂಟು ಬಿಚ್ಚಿಕೊಳ್ಳದೆ ಹಾರಾಡದೆ ನಿಂತಿದ್ದ ರಾಷ್ಟ್ರಧ್ವಜವನ್ನು ಹಾರಿಸಿದೆ ಎನ್ನಲಾದ ವಿಡಿಯೋ ವೈರಲ್ ಆಗುತ್ತಿದೆ. ಒಂದು ಕ್ಯಾಮೆರಾ ಆ್ಯಂಗಲ್ ನಲ್ಲಿ ಕಾಗೆ ಬಂದು ಧ್ವಜಾರೋಹಣ ಮಾಡಿದಂತೆಯೇ ಕಾಣಿಸುತ್ತದೆ. ಆದರೆ, ಇನ್ನೊಂದು ಕ್ಯಾಮೆರಾದಲ್ಲಿ ನೈಜ್ಯ ದೃಶ್ಯಗಳು ಸೆರೆಯಾಗಿದೆ.
ತ್ರಿವರ್ಣ ಧ್ವಜವನ್ನು ಹೇಗೆ, ಯಾವಾಗ ಹಾರಿಸಬೇಕು ಎಂಬ ನಿಯಮಗಳಿವೆ. ಅದೇ ರೀತಿ ಧ್ವಜವನ್ನು ಹೇಗೆ ಮಡಿಚಬೇಕು ಎಂಬುದರ ಕುರಿತು ಸಹ ನಿಯಮಗಳಿವೆ. ಆ ನಿಯಮಗಳ ಪ್ರಕಾರವೇ ಧ್ವಜವನ್ನು ಕಟ್ಟಿದಾಗ ಮಾತ್ರ ಕೆಳಗಿನ ದಾರ ಎಳೆದಾಗ ಅದು ಬಿಚ್ಚಿಕೊಳ್ಳುತ್ತದೆ. ಆದರೆ ಇಲ್ಲಿ ತಕ್ಷಣಕ್ಕೆ ಧ್ವಜ ಬಿಚ್ಚಿಕೊಂಡಿಲ್ಲ, ಕಂಬದಲ್ಲಿ ಶಿಕ್ಷಕರು ಧ್ವಜಕ್ಕೆ ಕಟ್ಟಿದ ದಾರವನ್ನು ಕೆಳಗಿನಿಂದ ಎಳೆಯುತ್ತಾರೆ. ಆದರೆ ಧ್ವಜ ಬಿಚ್ಚಿಕೊಳ್ಳಲ್ಲ. ಅಷ್ಟರಲ್ಲಿಯೇ ಧ್ವಜ ಕಂಬದ ಬಳಿ ಬರೋ ಪಕ್ಷಿ ಬಾವುಟ ಆರೋಹಣಕ್ಕೆ ಸಹಾಯ ಮಾಡಿದೆ ಎಂಬಂತೆ ವಿಡಿಯೋದಲ್ಲಿ ಕಂಡಿದೆ.
ಈ ವಿಡಿಯೋ ಫ್ಯಾಕ್ಟ್ ಚೆಕ್ ಮಾಡಲಾಗಿದ್ದು, ಬಳಿಕ ಸತ್ಯ ಬಯಲಾಗಿದೆ. ವೈರಲ್ ಆಗಿರುವ ಮತ್ತು ಒರಿಜಿನಲ್ ಅಂತ ಎರಡು ವಿಡಿಯೋಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪಕ್ಷಿ ಬಂದು ಧ್ವಜಾರೋಹಣ ಮಾಡಿಲ್ಲ. ಕ್ಯಾಮೆರಾ ಆ್ಯಂಗಲ್ ನಿಂದ ನಮಗೆ ಆ ರೀತಿ ಕಾಣಿಸುತ್ತಿದೆ. ಧ್ವಜಾರೋಹಣ ಸಮಯದಲ್ಲಿ ಧ್ವಜಸ್ತಂಭಕ್ಕೆ ನೇರವಾಗಿರುವ ತೆಂಗಿನ ಮರದ ಮೇಲೆ ಬಂದು ಕಾಗೆ ಕುಳಿತುಕೊಂಡಿದೆ. ಧ್ವಜ ಹಾರುತ್ತಿದ್ದಂತೆ ಕಾಗೆಯೂ ಹೆದರಿ ಮರದಿಂದ ಹಾರಿ ಹೋಗುವುದು ಮತ್ತೊಂದು ವಿಡಿಯೋದಲ್ಲಿ ಸೆರೆಯಾಗಿದೆ. ಹಾಗಾಗಿ ಈ ವಿಡಿಯೋ ಸತ್ಯಕ್ಕೆ ದೂರವಾದದ್ದು ಎನ್ನಲಾಗಿದೆ.