ನ್ಯೂಸ್ ನಾಟೌಟ್: ಆಹಾರದಲ್ಲಿ ಕಲಬೆರೆಕೆ ಆಗುತ್ತಿರುವ ಬಗ್ಗೆ ಪ್ರತಿ ನಿತ್ಯ ದೂರುಗಳು ಕೇಳಿ ಬರುತ್ತಿವೆ. ಒಂದಲ್ಲ ಎರಡಲ್ಲ ಹಲವಾರು ಸತ್ಯ ಸಂಗತಿಗಳು ಬಯಲಾಗುತ್ತಿವೆ. ಇದೀಗ ಬೆಳ್ಳುಳ್ಳಿಯ ಸರದಿ.
ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅನ್ನುತ್ತೀವಿ. ಆದರೆ ಬೆಳ್ಳುಳ್ಳಿ ತಿನ್ನೊ ಮುಚ್ಚೆ ಇನ್ನು ಮುಂದೆ ಸ್ವಲ್ಪ ಯೋಚಿಸಬೇಕಾದ ಸಮಯ ಬಂದಿದೆ.
ನಕಲಿ ಬೆಳ್ಳುಳ್ಳಿಯೂ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಇಂಥ ಆಹಾರಗಳೂ ಕೂಡ ಈಗ ನಕಲಿಯಾಗಿ ಸಿಗುತ್ತಿವೆ ಎಂಬುದು ಸಾಬೀತಾಗಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದ ಅಕೋಲ ಜಿಲ್ಲೆಯಲ್ಲಿ ನಕಲಿ ಬೆಳ್ಳುಳ್ಳಿಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಇದು ಭಾರೀ ಸದ್ದು ಮಾಡುತ್ತಿದೆ. ಇದರ ವಿಡಿಯೋಗಳೂ ವೈರಲ್ ಆಗುತ್ತಿವೆ.
ವಿಡಿಯೋನಲ್ಲಿ ಒಬ್ಬಾತ ಬೆಳ್ಳುಳ್ಳಿಯ ಸಿಪ್ಪೆ ಸುಲಿಯುತ್ತಿದ್ದು, ಒಳಗೆ ನಿಜವಾದ ಬೆಳ್ಳುಳಿಯ ಎಸಳಿನ ಬದಲಾಗಿ ಸಿಮೆಂಟ್ ನಿಂದ ಮಾಡಲ್ಪಟ್ಟ ಗಟ್ಟಿಯಾದ ಬೆಳ್ಳುಳ್ಳಿ ಎಸಳುಗಳು ದೊರೆತುದು ಗ್ರಾಹಕರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಹೀಗೂ ನಕಲಿ ಸೃಷ್ಟಿಯಾಗುತ್ತದೆಯೇ ಎಂಬ ಆತಂಕವನ್ನೂ ಇದು ಸೃಷ್ಟಿ ಮಾಡಿದೆ. ಬನ್ನಿ, ನೀವೂ ಬೆಳ್ಳುಳ್ಳಿ ಕೊಳ್ಳುವ ಮೊದಲು ಕೆಲವು ಸಾಮಾನ್ಯ ಪರೀಕ್ಷೆಗಳನ್ನು ಮಾಡಿಯೇ ಖರೀದಿಸಿಕೊಳ್ಳಿ.
ಬೆಳ್ಳುಳ್ಳಿಯನ್ನು ಕೊಳ್ಳುವಾಗ ಗಡಿಬಿಡಿ ಮಾಡಬೇಡಿ. ಸಮಾಧಾನದಿಂದ ಅದರ ಆಕಾರ ಹಾಗೂ ಗಾತ್ರವನ್ನು ಪರಿಶೀಲಿಸಿ. ಸಣ್ಣ ಎಸಳುಗಳ ಬೆಳ್ಳುಳ್ಳಿ ಕಾಣಿಸಿದರೆ ಕೊಂಚ ಎಚ್ಚರಿಕೆ ವಹಿಸಿ. ಇಂಥದ್ದರಲ್ಲಿ ನಕಲಿ ಇರುವ ಸಂಭವ ಹೆಚ್ಚು.
ಬೆಳ್ಳುಳ್ಳಿಯ ಬಣ್ಣವನ್ನು ಗಮನಿಸಿ. ಸಾಮಾನ್ಯವಾಗಿ ಬೆಳ್ಳುಳ್ಳಿ ಬೆಳ್ಳಗೆ ಇದ್ದರೂ ಅದರ ಸಿಪ್ಪೆಯಲ್ಲಿ ಅಲ್ಲಲ್ಲಿ, ಪಿಂಕ್ ಹಾಗೂ ನೇರಳೆ ಬಣ್ಣದ ರೇಖೆಗಳು, ಕುರುಹುಗಳು ಇರುತ್ತವೆ. ನಿಮ್ಮ ಬೆಳ್ಳುಳ್ಳಿ ಬಹಳ ಬಿಳಿಯಿದ್ದರೆ ಹಾಗೂ ಹಳದಿ ಬಣ್ಣದ ಛಾಯೆಗಳು ಅಲ್ಲಲ್ಲಿ ಕಾಣಿಸಿದರೆ ಅದು ನಕಲಿಯಾಗಿರುವ ಸಾಧ್ಯತೆ ಹೆಚ್ಚು.
ಅತ್ಯಂತ ಒಳ್ಳೆಯ ಉಪಾಯ ಎಂದರೆ ನೀವೇ ಮುಟ್ಟಿ ನೋಡಿ ಖರೀದಿಸುವುದು. ಬೆಳ್ಳುಳ್ಳಿಯನ್ನು ಕೈಯಲ್ಲಿ ಹಿಡಿದು, ಅದರ ಎಸಳೊಂದನ್ನು ಸ್ವಲ್ಪ ಹಿಸುಕಿ ನೋಡಿ. ಅದು ಅತಿಯಾಗಿ ಮೆದುವಾಗಿದ್ದರೆ, ಅದು ಕಲಬೆರಕೆಯಾಗಿರಲೂಬಹುದು. ಇಂಜೆಕ್ಷನ್ ನೀಡಿದ ಬೆಳ್ಳುಳ್ಳಿಗಳೂ ಮಾರುಕಟ್ಟೆಗೆ ಬರುತ್ತವೆ. ಹಾಗಾಗಿ ಈ ಬಗ್ಗೆಯೂ ಎಚ್ಚರಿಕೆ ವಹಿಸಿದರೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.