ನ್ಯೂಸ್ ನಾಟೌಟ್: ಸರ್ಕಾರಿ ನೌಕರಿ ಪಡೆಯಲು ನಕಲಿ ಅಂಕಪಟ್ಟಿ ಸಲ್ಲಿಸಿ, ನೌಕರಿ ಪಡೆಯಲು ಮುಂದಾಗಿದ್ದ 37 ಮಂದಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಕಲಿ ಮಾರ್ಕ್ಸ್ಕಾರ್ಡ್ ಸಲ್ಲಿಸಿ ನೇರವಾಗಿ ಜಲ ಸಂಪನ್ಮೂಲ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆ ಪಡೆಯಲು ಮುಂದಾಗಿದ್ದರು. ಅಲ್ಲದೆ ಈ ಜಾಲದಲ್ಲಿ ಸರ್ಕಾರಿ ನೌಕರರು ಹಾಗೂ ಬ್ರೋಕರ್ಗಳು ಕೂಡ ಇದ್ದು 11 ಮಂದಿಯನ್ನು ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸರು ಬಂಧಿಸಿದ್ದಾರೆ. ಇವರಿಂದ 17 ಮೊಬೈಲ್ಗಳು, ಎರಡು ಕಾರುಗಳು, ಕಂಪ್ಯೂಟರ್ ಹಾರ್ಡ್ಡಿಸ್ಕ್ ಜಪ್ತಿ ಮಾಡಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರ ಪೊಲೀಸ್ ಸ್ಟೇಷನ್ನಲ್ಲಿ ದಾಖಲಾಗಿದ್ದ ಈ ಕೇಸ್ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ತನಿಖೆ ಆರಂಭಿಸಿದ್ದ ಅಧಿಕಾರಿಗಳು, ವಿಶೇಷ ತಂಡ ರಚಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಮಂದಿ ನಕಲಿ ಅಂಕಪಟ್ಟಿ ಸಲ್ಲಿಸಿರುವುದು ಪತ್ತೆಯಾಗಿದೆ. ಉಳಿದಂತೆ ಹಾಸನ, ವಿಜಯಪುರ, ಚಿತ್ರದುರ್ಗ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ವಿಜಯನಗರ ಜಿಲ್ಲೆಯಯವರೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಉನ್ನುಳಿದಂತೆ 12 ಜಿಲ್ಲೆಗಳ 62 ಅಭ್ಯರ್ಥಿಗಳು ಕೂಡ ನಕಲಿ ಅಂಕಪಟ್ಟಿ ಸಲ್ಲಿಸಿರುವ ಮಾಹಿತಿಯಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ದಯಾನಂದ್ ತಿಳಿಸಿದ್ದಾರೆ.
ಜಲ ಸಂಪನ್ಮೂಲ ಇಲಾಖೆಯಲ್ಲಿ ಬ್ಯಾಕ್ಲಾಗ್ ಕೋಟಾದಲ್ಲಿದ್ದ ದ್ವಿತೀಯ ದರ್ಜೆ ಸಹಾಯಕರ 182 ಹುದ್ದೆಗಳ ಭರ್ತಿಗೆ 2022ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ್ದವರಲ್ಲಿ 62 ಅಭ್ಯರ್ಥಿಗಳು ಇಲಾಖೆ ನಿಗದಿಪಡಿಸಿದ್ದ ಅರ್ಹತೆ ಹೊಂದಿರಲಿಲ್ಲ. ಆದರೂ ನಕಲಿ ದಾಖಲೆಗಳನ್ನು ಸಲ್ಲಿಸಿ ಹುದ್ದೆ ಪಡೆಯಲು ಪ್ರಯತ್ನಿಸಿದ್ದರು. ನಕಲಿ ಅಂಕಪಟ್ಟಿ ತಯಾರಿಸುವ ಜಾಲದ ಸಹಾಯದಿಂದ ಈ ಕೃತ್ಯ ನಡೆದಿರುವುದು ತಿಳಿದಿತ್ತು.
ದ್ವಿತೀಯ ಪಿಯುಸಿ ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಸಿಕೊಂಡು, ಆನ್ಲೈನ್ ಮೂಲಕ ಜಲ ಸಂಪನ್ಮೂಲ ಇಲಾಖೆಯ ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದರು. ದಾಖಲೆ ಪರಿಶೀಲನೆ ವೇಳೆ ಈ ಅಕ್ರಮದ ಸುಳಿವು ಸಿಕ್ಕಿತ್ತು. ಆಗ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು.
Click