ಲೈಂಗಿಕ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ 300 ಜನರ ವಿರುದ್ಧ ಎಫ್‌.ಐ.ಆರ್..! ಪ್ರಾಂಶುಪಾಲರು, ತರಗತಿ ಶಿಕ್ಷಕಿ ಹಾಗೂ ಮಹಿಳಾ ಅಟೆಂಡರ್‌ ಅಮಾನತ್ತು.!

ನ್ಯೂಸ್ ನಾಟೌಟ್: ಮುಂಬೈನ ಥಾಣೆಯ ಬದ್ಲಾಪುರದ ಶಾಲೆಯೊಂದರಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಮಾಡಿದ್ದ ಸುಮಾರು 300 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಥಾಣೆ ಪೊಲೀಸರು 40ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ್ದು, ಅವರನ್ನು ಇಂದು(ಆ.21) ನ್ಯಾಯಾಲಯಕ್ಕೆ ಹಾಜರುಪಡಿಸಲು ನಿರ್ಧರಿಸಲಾಗಿದೆ. ಮೂರು ಮತ್ತು ನಾಲ್ಕು ವರ್ಷ ವಯಸ್ಸಿನ ಇಬ್ಬರು ಶಿಶುವಿಹಾರದ ವಿದ್ಯಾರ್ಥಿಗಳ ಮೇಲೆ ಶಾಲೆಯ ಶೌಚಾಲಯದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಆಗಸ್ಟ್ 17 ರಂದು ಶಾಲೆಯ ಅಟೆಂಡರ್ ಅನ್ನು ಬಂಧಿಸಿದ ನಂತರ ಪ್ರತಿಭಟನೆಗಳು ಭುಗಿಲೆದ್ದವು. ಘಟನೆಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿಯು ಪ್ರಾಂಶುಪಾಲರು, ತರಗತಿ ಶಿಕ್ಷಕಿ ಹಾಗೂ ಮಹಿಳಾ ಅಟೆಂಡರ್‌ನನ್ನು ಈಗಾಗಲೇ ಅಮಾನತ್ತುಗೊಳಿಸಿದೆ. ಘಟನೆಯಲ್ಲಿ ಕರ್ಜಾತ್ ಮತ್ತು ಕಲ್ಯಾಣ್ ವಿಭಾಗಗಳ ನಡುವಿನ ರೈಲು ಸೇವೆಗಳಿಗೆ ಅಡ್ಡಿಯಾಗಿತ್ತು. ಪ್ರತಿಭಟನೆಯಲ್ಲಿ ಹಲವಾರು ಮಹಿಳೆಯರು ಸೇರಿದಂತೆ ಪೋಷಕರು ಭಾಗಿಯಾಗಿದ್ದರು. ಲೈಂಗಿಕ ದೌರ್ಜನ್ಯಕ್ಕೆ ಕಾರಣರಾದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು. Click