ನ್ಯೂಸ್ ನಾಟೌಟ್: ದೇಶ ಕಾಯುವ ಸೈನಿಕರ ಮೇಲೆ ವಿಪರೀತ ಗೌರವ ಇರುತ್ತೆ. ಅಪಾರವಾದ ಪ್ರೀತಿ ಇರುತ್ತೆ. ಸಾಮಾನ್ಯವಾಗಿ ನಾವು ಏನ್ ಮಾಡ್ತೀವಿ ಹೇಳಿ…ಸ್ವಾತಂತ್ರ್ಯ ದಿನಾಚರಣೆಯಂದು ನಿವೃತ್ತ ಸೈನಿಕರನ್ನ ವೇದಿಕೆಗೆ ಕರೆಯಿಸಿ ಸನ್ಮಾನ ಮಾಡ್ತೀವಿ. ಇಲ್ಲ ಬಾಯ್ತುಂಬ ಹೊಗಳ್ತೀವಿ ಬಿಡ್ತಿವಿ. ಇದೆಲ್ಲ ಮಾಮೂಲಿ. ಇದೆಲ್ಲವನ್ನೂ ಮೀರಿದ ಒಬ್ಬ ಸೈನಿಕರೂ ನಮ್ಮ ನಡುವೆ ಇರುತ್ತಾರೆ.
ಈ ಯೋಧ ಯಾವ ಸಂದರ್ಭದಲ್ಲಿ ಎಂತಹ ಕೆಲಸವನ್ನೂ ಬೇಕಾದರೂ ನಿಭಾಯಿಸುತ್ತಿದ್ದರು, ಗಡಿಯಲ್ಲಿ ಮಾತ್ರವಲ್ಲ ಜನರಿಗೆ ತುರ್ತಾಗಿ ಅಗತ್ಯವಾಗಿರುವ ಸಂದರ್ಭದಲ್ಲೂ ಊರಿನಲ್ಲಿದ್ದರೂ ಸ್ಪಂದಿಸುತ್ತಿದ್ದರು. ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕದ ಮಾಜಿ ಸೈನಿಕ. ಹೆಸರು ಕೆ.ಪಿ. ಜಗದೀಶ್. ಸದ್ಯ ಅವರಿಗೆ 70 ವರ್ಷವಾಗಿದೆ. ಈ ಇಳಿವಯಸ್ಸಿನಲ್ಲೂ “ಏಜ್ ಈಸ್ ಜಸ್ಟ್ ನಂಬರ್’ ಅನ್ನುವ ಯುವಕ. ಅವರ ಸಾಹಸ ಗಾಥೆ ಇಂದಿನ ಯುವಕರಿಗೆ ಸ್ಫೂರ್ತಿಯಾಗಲಿ, ಮಾದರಿಯಾಗಲಿ ಅನ್ನೋ ಕಾರಣಕ್ಕೆ ಇದನ್ನ ಇಲ್ಲಿ ಉಲ್ಲೇಖಿಸುತ್ತಿದ್ದೇನೆ ಓದಿ.
ಕೆ.ಪಿ. ಜಗದೀಶ್ 1974ರಲ್ಲಿ ಇಂಡಿಯನ್ ಆರ್ಮಿಗೆ ಸೇರ್ಪಡೆಗೊಳ್ತಾರೆ. ಅಲ್ಲಿ ದೇಶ ಸೇವೆಯನ್ನು ಮಾಡುತ್ತಾರೆ. ಹಾಗೆ ಸೇವೆ ಸಲ್ಲಿಸುತ್ತಿದ್ದವರು ರಜೆಯಲ್ಲಿ ಊರಿಗೆ ಬರುವಾಗ ಸುಮ್ಮನ ಕುಳಿತುಕೊಳ್ಳುತ್ತಿರಲಿಲ್ಲ. ಮುಖ್ಯವಾಗಿ ಪ್ರಮುಖ ನಾಲ್ಕು ಘಟನೆಗಳನ್ನು ನಾವು ನೆನಪಿಸಿಕೊಳ್ಳೋಣ.
1985ನೇ ಇಸವಿ. ಅಂದು ತೆಂಕಿಲ ಶೇಷಮ್ಮ ಹಾಗೂ ಮೋಹನ ದಾಸ ಎಂಬ 14 ವರ್ಷದ ಬಾಲಕ ಪಯಸ್ವಿನಿ ನದಿಯ ‘ಬಬ್ರಿ ಗುಂಡಿ’ಗೆ ಬಟ್ಟೆ ಒಗೆಯುವುದಕ್ಕೆ ಹೋಗಿದ್ದರು. ಈ ವೇಳೆ 14 ವರ್ಷದ ಬಾಲಕ ಕಾಲು ಜಾರಿ ಬಂಬ್ರಿ ಗುಂಡಿಗೆ ಬೀಳುತ್ತಾನೆ, ಆತನ ರಕ್ಷಣೆಗೆಂದು ಅಜ್ಜಿಯೂ ನೀರಿಗೆ ಧುಮುಕುತ್ತಾರೆ. ಇಬ್ಬರೂ ಕೂಡ ಮೇಲಕ್ಕೆ ಬರಲಾಗದೆ ನೀರಿನಾಳದಲ್ಲಿ ಒದ್ದಾಡಿ ಉಸಿರು ಚೆಲ್ಲುತ್ತಾರೆ. ಅಂದು ರಜೆಯಲ್ಲಿ ಬಂದಿದ್ದ ಕೆ.ಪಿ. ಜಗದೀಶ್ ಅವರಿಗೆ ಈ ವಿಷಯ ಗೊತ್ತಾಗುತ್ತೆ. ಕೂಡಲೇ ಅವರು ಸ್ಥಳಕ್ಕೆ ಬರ್ತಾರೆ. ಗಟ್ಟಿ ನಿರ್ಧಾರ ಮಾಡಿ ನೀರಿಗೆ ಇಳಿಯುತ್ತಾರೆ. ಎಷ್ಟು ಹುಡುಕಿದರೂ ಶವ ಸಿಗುವುದಿಲ್ಲ. ಜೊತೆಗೆ ಕತ್ತಲಾಗುತ್ತಾ ಬರುತ್ತದೆ. ಅಲ್ಲದೆ ವಿಪರೀತ ಮಳೆ ಕೂಡ ಇತ್ತು. ಶವಗಳನ್ನು ಆ ಗುಂಡಿಯಿಂದ ರಾತ್ರಿ ಮೇಲಕ್ಕೆತ್ತುವುದಕ್ಕೆ ಸಾಧ್ಯವಿರಲಿಲ್ಲ. ಹೀಗಾಗಿ ಮರುದಿನ ಬೆಳಗ್ಗೆ ಶವ ಎತ್ತುವುದಕ್ಕೆ ನಿರ್ಧರಿಸಲಾಯಿತು. ಮರುದಿನ ಸತತ ಕಾರ್ಯಾಚರಣೆ ನಡೆಸಿ ಕೆಪಿ ಅವರು ಎರಡೂ ಶವಗಳನ್ನು ಕೂಡ ಮೇಲೆಕ್ಕೆತ್ತುತ್ತಾರೆ. ವಿಶೇಷ ಅಂದರೆ ಈ ಬಬ್ರಿ ಗುಂಡಿ ಹಿಂದೆ ಅನೇಕ ಕಥೆಗಳಿವೆ. ಅಲ್ಲಿ ಯಾರೂ ಕೂಡ ಆಳ ನೋಡುವ ಸಾಹಸ ಮಾಡುವುದಿಲ್ಲ .ಅಂತಹ ಗುಂಡಿಯಲ್ಲಿ ಕೆ.ಪಿ ಜಗದೀಶ್ ಅವರ ಸಾಹಸ ನಿಜಕ್ಕೂ ಮೆಚ್ಚತಕ್ಕದ್ದು.
ಇದು 1987 ರ ಮತ್ತೊಂದು ಘಟನೆ. ಕೆ.ಪಿ ಜಗದೀಶ್ ಅವರು ಆಗ ತಾನೆ ರಜೆಯಲ್ಲಿ ಊರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ತನ್ನ ಚಿಕ್ಕಪ್ಪ ರಾಮಣ್ಣ ಗೌಡ ಅವರು ಬಾವಿಗೆ ಬಿದ್ದಿದ್ದರು. ಈ ವೇಳೆ ಜೀವದ ಹಂಗು ತೊರೆದು ಬಾವಿಗಿಳಿದು ಅವರ ಪ್ರಾಣವನ್ನು ಕೆ.ಪಿ ರಕ್ಷಿಸಿದ್ದರು. ಇನ್ನು 2002 ರಲ್ಲಿ ಗೂನಡ್ಕದ ಮಸೀದಿಗೆ ಬೆಂಕಿ ಬಿದ್ದ ಸಂದರ್ಭದಲ್ಲಿಯೂ ಕೆಪಿ ಅವರು ಜಾತಿ, ಧರ್ಮವನ್ನು ಮೀರಿ ನಿಂತು ಒಬ್ಬ ಯೋಧನಾಗಿ ಮುಂಚೂಣಿಯಲ್ಲಿ ನಿಂತು ಕಾರ್ಯಾಚರಣೆ ನಡೆಸಿದ್ದರು. ಬೆಂಕಿ ನಂದಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
2008ರಲ್ಲಿ ರಂಗಪ್ಪ ಎಂಬ ವ್ಯಕ್ತಿ ಪಯಸ್ವಿನಿ ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಐದಾರು ದಿನವಾದರೂ ಶವ ಸಿಕ್ಕಿರಲಿಲ್ಲ. ಪೇರಡ್ಕ ಹೊಳೆಯ ಹತ್ತಿರ ಮುಳುಗು ಸೇತುವೆ ಇತ್ತು. ಬಿದಿರು ಹಿಂಡಿಲಿನಲ್ಲಿ ಕೊಳೆತ ಸ್ಥಿತಿಯಲ್ಲಿ ಬಾಡಿ ಪತ್ತೆಯಾಗಿತ್ತು. ಈ ಸಂದರ್ಭದಲ್ಲಿ ನದಿಗಿಳಿದು ಕೆ.ಪಿ. ಜಗದೀಶ್ ಕಾರ್ಯಾಚರಣೆ ನಡೆಸಿದ್ದರು. ಕೊಳೆತ ಸ್ಥಿತಿಯಲ್ಲಿದ್ದ ಬಾಡಿಯೊಳಗೆ ತನ್ನ ಬೆರಳು ಹೊಕ್ಕುತ್ತಿತ್ತು, ಜೊತೆಗೆ ಅಸಹನೀಯ ವಾಸನೆ ಬರುತ್ತಿದ್ದರೂ ಅಂದು ಬಾಡಿಯನ್ನು ಹೊರ ತೆಗೆದದ್ದು ಇಂದಿಗೂ ಎಲ್ಲರ ಮೈ ರೋಮಾಂಚನಗೊಳಿಸುತ್ತೆ.
ಇದಿಷ್ಟು ಕೆ.ಪಿ. ಜಗದೀಶ್ ಎಂತಹ ಸಾಹಸಿ ಯೋಧ ಅನ್ನುವುದಕ್ಕೆ ಪ್ರತ್ಯಕ್ಷ ಉದಾಹರಣೆ. ನಿವೃತ್ತಿಯ ನಂತರ ಅವರು ಕ್ರೀಡಾ ಕ್ಷೇತ್ರ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಗುರುತಿಸಿಕೊಂಡವರು. ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕುಯಿಂತೋಡು ಗಂಗಮ್ಮ -ಪದ್ಮಯ್ಯ ಕೆ.ಎಸ್ ಅವರ ದ್ವಿತೀಯ ಪುತ್ರ. 1954, ಡಿಸೆಂಬರ್ 18ರಂದು ಜನನ. ಪ್ರಾಥಮಿಕ ಶಿಕ್ಷಣವನ್ನು ಗೂನಡ್ಕ, ಪ್ರೌಢಶಿಕ್ಷಣವನ್ನು ಫಿಲೋಮಿನಾ ಮತ್ತು ಪ.ಪೂ. ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಡೆದರು. ಬಳಿಕ ಸೈನ್ಯ ಸೇರಿದವರು. ಮಧ್ಯಪ್ರದೇಶ, ಕೋಲ್ಕತ್ತಾ, ಜಲಂಧರ್, ಕಾಶ್ಮೀರದಲ್ಲಿ ಸೈನಿಕರಾಗಿ ಕೆಲಸ ಮಾಡಿದ್ದಾರೆ. ಪೂನಾದಲ್ಲಿ ದೈಹಿಕ ಶಿಕ್ಷಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ.
ಇಂತಹ ಯೋಧರು ನಮ್ಮ ನಿಮ್ಮ ನಡುವೆ ಹಲವಾರು ಮಂದಿ ಇದ್ದಾರೆ. ಅಂತಹ ಯೋಧರೇ ಮುಂದಿನ ಪೀಳಿಗೆಗೆ ಆದರ್ಶ, ಸ್ಫೂರ್ತಿ ಮಾದರಿ..ಏನಂತಿರಾ..? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ ಮಾಡಿ ತಿಳಿಸಿ.. ಧನ್ಯವಾದಗಳು.. ನಮಸ್ಕಾರ.