ನ್ಯೂಸ್ ನಾಟೌಟ್: ಮೈಸೂರಿನ ಚಾಮುಂಡಿ ಬೆಟ್ಟ ರಾಜವಂಶಸ್ಥರ ಖಾಸಗಿ ಆಸ್ತಿ. ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಬಾರದು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವಿರೋಧ ವ್ಯಕ್ತಪಡಿಸಿ ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ರಾಜ್ಯ ಸರ್ಕಾರದ ವಿರುದ್ಧ ಹೈಕೋಟ್೯ ನಲ್ಲಿ ತಡೆಯಾಜ್ಞೆ ತಂದಿದ್ದಾರೆ.
ಈ ಸಂಬಂಧ ನಗರದ ಅರಮನೆ ಆವರಣದಲ್ಲಿ ಸೋಮವಾರ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಾಮುಂಡಿ ಬೆಟ್ಟ ನಮಗೆ ಸೇರಿದ್ದು, ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಸರಿಯಲ್ಲ. ಚಾಮುಂಡಿ ಬೆಟ್ಟ ಬೆಟ್ಟವಾಗೆ ಉಳಿಯಬೇಕು. ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಿ 2024 ರ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು. ಈ ಸಂಬಂಧ ನಾವು ಹೈಕೋಟ್೯ ನಲ್ಲಿ ದಾವೆ ಹೂಡಿದ್ದು ಜುಲೈ 26 ರಂದು ಇದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಆದೇಶ ಪ್ರತಿ ಬಿಡುಗಡೆ ಮಾಡಿದ್ದಾರೆ.
ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದ ಮೇಲೆ ರಾಜರ ಆಸ್ತಿಯನ್ನು ಭಾರತ ಸರ್ಕಾರ ವಶಕ್ಕೆ ಪಡೆಯುವ ವೇಳೆ ಕೆಲವು ಜಾಗಗಳನ್ನು ರಾಜವಂಶಸ್ಥರಿಗೆ ಬಿಟ್ಟುಕೊಟ್ಟಿದೆ. ಹಾಗಾಗಿ ಚಾಮುಂಡಿ ಬೆಟ್ಟ, ರಾಜೇಂದ್ರ ವಿಲಾಸ ಅರಮನೆ, ದೇವಿ ಕೆರೆ, ನಾರಾಯಣಸ್ವಾಮಿ ದೇವಸ್ಥಾನ, ಮಹಾಬಲೇಶ್ವರ ದೇವಸ್ಥಾನ ಸೇರಿದಂತೆ ಹಲವು ಜಾಗಗಳು ರಾಜವಂಶಸ್ತರಿಗೆ ಸೇರಿದ್ದು, ಅಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಅಭಿವೃದ್ಧಿ ಮಾಡುವಂತಿಲ್ಲ ಎಂದು ಹೇಳಿದರು.