ಎರಡನೇ ಮಹಡಿಯಿಂದ ಹುಡುಗನ ತಲೆ ಮೇಲೆ ಬಿದ್ದ ಎಸಿ..! 18 ವರ್ಷದ ಯುವಕ ಸಾವು, ಇನ್ನೋರ್ವ ಗಂಭೀರ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್‌ ನಾಟೌಟ್‌: ಕಟ್ಟಡದ ಎರಡನೇ ಮಹಡಿಯಿಂದ ಎಸಿಯೊಂದು ತಲೆ ಮೇಲೆ ಬಿದ್ದ ಪರಿಣಾಮ 18 ವರ್ಷದ ಯುವಕ ಮೃತಪಟ್ಟಿರುವ ಘಟನೆ ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ನಡೆದಿದೆ. ಶನಿವಾರ (ಆ.17ರಂದು) ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿತೇಶ್ ಚಡ್ಡಾ(18) ಎನ್ನುವ ಯುವಕ ಸ್ಕೂಟರ್‌ ನಲ್ಲಿ ಕೂತು ತನ್ನ ಸ್ನೇಹಿತನ ಜೊತೆ ಮಾತನಾಡುತ್ತಿದ್ದ. ಈ ವೇಳೆ ಕಟ್ಟಡವೊಂದರ ಎರಡನೇ ಮಹಡಿಯಿಂದ ಎಸಿಯೊಂದು ನೇರವಾಗಿ ಯುವಕರಿಬ್ಬರ ಮೇಲೆ ಬಿದ್ದಿದೆ. ಪರಿಣಾಮ ಜಿತೇಶ್‌ ಹಾಗೂ ಆತನ ಸ್ನೇಹಿತ ಪ್ರಾಂಶು ಎಂಬಾತ ನೆಲಕ್ಕೆ ಬಿದ್ದಿದ್ದಾರೆ. ಕೂಡಲೇ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗಮಧ್ಯೆಯೇ ಜಿತೇಶ್‌ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅವರ ಸ್ನೇಹಿತನಿಗೆ ಚಿಕಿತ್ಸೆ ಮುಂದುವರೆಸಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದೆ.ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ. ಡಿಬಿಜಿ ರಸ್ತೆಯಲ್ಲಿರುವ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.