ನ್ಯೂಸ್ ನಾಟೌಟ್: ಉಗ್ರರು ಬಸ್ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 23 ಮಂದಿ ಸಾವನ್ನಪ್ಪಿದ ಘಟನೆ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸೋಮವಾರ(ಆ.25) ಬೆಳಗ್ಗೆ ನಡೆದಿದೆ.
ಬಸ್ ನ ಮೇಲೆ ದಾಳಿ ನಡೆಸಿದ ಭಯೋತ್ಪಾದಕರು ಪ್ರಯಾಣಿಕರನ್ನು ಬಸ್ ನಿಂದ ಕೆಳಗಿಳಿಸುವಂತೆ ಮಾಡಿದರು. ಬಳಿಕ ಅವರ ಗುರುತು ಚೀಟಿಗಳನ್ನು ಪರಿಶೀಲಿಸಿದ ನಂತರ ಗುಂಡು ಹಾರಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾರಾಶಮ್ ಜಿಲ್ಲೆ ಮತ್ತು ಮುಸಾಖೆಲ್ ನಡುವಿನ ಅಂತರ ಪ್ರಾಂತೀಯ ಹೆದ್ದಾರಿಯನ್ನು ಬ್ಲಾಕ್ ಮಾಡಿದ ಉಗ್ರರು ಬಸ್ ನಿಂದ ಪ್ರಯಾಣಿಕರನ್ನು ಒತ್ತಾಯಪೂರ್ವಕವಾಗಿ ಕೆಳಕ್ಕೆ ಇಳಿಯುವಂತೆ ಮಾಡಿದರು ಎಂದು ಅಸಿಸ್ಟೆಂಟ್ ಕಮಿಷನರ್ ನಜೀಬ್ ಕಕರ್ ಹೇಳಿದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ತಾವು ಪಂಜಾಬ್ ನವರು ಎಂದು ಹೇಳಿದ ಪ್ರಯಾಣಿಕರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಡಾನ್ ವರದಿ ತಿಳಿಸಿದೆ. ಇದುವರೆಗೆ ಯಾವುದೇ ಗುಂಪು ಈ ಘಟನೆಯ ಜವಾಬ್ದಾರಿ ವಹಿಸಿಲ್ಲ. ಉಗ್ರರು ಇತರ ಹತ್ತು ವಾಹನಗಳ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
Click