(ಲೇಖನ ಸಂಗ್ರಹ, ವರದಿ ವಿಶ್ಲೇಷಣೆ: ಹರ್ಷಿತಾ ವಿನಯ್)
ನ್ಯೂಸ್ ನಾಟೌಟ್: “ತಾಯಿಯ ಹಾಲು ಅಮೃತವಿದ್ದಂತೆ ಅದು ಮಗುವಿಗೆ ಶ್ರೇಷ್ಠ ಆಹಾರ ಅದಕ್ಕೆ ಸರಿಸಾಟಿ ಯಾವುದು ಇಲ್ಲ” ಸ್ತನ್ಯಪಾನ ಸಪ್ತಾಹ ವಿಶ್ವದಾದ್ಯಂತ ಆಗಸ್ಟ್ 1ರಿಂದ ಆಗಸ್ಟ್ 7 ರವರೆಗೆ ತಾಯಿಯ ಎದೆಹಾಲಿನ ಪ್ರಾಮುಖ್ಯತೆಯ ಅರಿವು ಮೂಡಿಸಲು ಆಚರಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ತಾಯಂದಿರಲ್ಲಿ ಹಾಲುಣಿಸುವಿಕೆ, ಸ್ತನ್ಯಪಾನದ ಪ್ರಾನುಖ್ಯತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ ಸುನೀತಾ ಹಲವು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ವಿಶ್ವ ಸ್ತನ್ಯಪಾನ ಸಪ್ತಾಹವು ಪ್ರಥಮ ಬಾರಿಗೆ 1992ರಲ್ಲಿ WABA(World Alliance for Breastfeeding Action) ನಿಂದ ಆಚರಣೆಗೆ ತರಲಾಯಿತು. ತದನಂತರ UNICEF ಮತ್ತು WHO ಮತ್ತಿತರ ಸಂಘಟನೆಗಳು ಸೇರಿ ಇದನ್ನು ಮುಂದುವರೆಸಿಕೊಂಡು ಬಂದು, ನಂತರದಲ್ಲಿ ವಿಶ್ವದಾದ್ಯಂತ 120ಕ್ಕೂ ಹೆಚ್ಚು ದೇಶಗಳಲ್ಲಿ ಪ್ರತಿ ವರ್ಷ ಆಗಸ್ಟ್ 1ರಿಂದ 7 ರವರೆಗೆ ಸ್ತನ್ಯಪಾನ ಸಪ್ತಾಹ ಆಚರಿಸುತ್ತಿವೆ.
ಪ್ರತಿ ವರ್ಷವೂ ಒಂದು ವಿಷಯವನ್ನು (ಥೀಮ್) ಉದ್ದೇಶಿಸಿ ಈ ಸಪ್ತಾಹವನ್ನು ಆಚರಿಸಲಾಗುತ್ತದೆ. ಈ ವರ್ಷದ ವಿಶೇಷತೆ ಏನೆಂದರೆ- ಎಲ್ಲಾರಿಗೂ ಹಾಲುಣಿಸುವ ಬೆಂಬಲದ ಅಂತರವನ್ನು ಮುಚ್ಚುವುದು(Closing the gap) ಅಂದರೆ ಇದರ ಅರ್ಥ ಮಹಿಳೆಯರಿಗೆ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಸ್ತನ್ಯಪಾನ ಮಾಡಲು ಸಮುದಾಯದ ಬೆಂಬಲವು ಸಾರ್ವಜನಿಕ ಜೀವನದಲ್ಲಿ ಸಮಾನವಾಗಿ ಸಿಗಬೇಕು ಎಂಬುದಾಗಿದೆ.
- ತಮ್ಮ ಕುಟುಂಬಗಳು ಮತ್ತು ಅವರ ಕೆಲಸದ ನಡುವೆ ಆಯ್ಕೆ ಮಾಡಲು ಮಹಿಳೆಯರನ್ನು ಒತ್ತಾಯಿಸದೆ ಪರಿಣಾಮಕಾರಿ ಮಾತೃತ್ವ ಹಕ್ಕುಗಳನ್ನು ತರಬೇಕು
- ಸ್ತನ್ಯಪಾನ ಬೆಂಬಲವನ್ನು ಒದಗಿಸುವ ತರಬೇತಿ ಪಡೆದ ಆರೋಗ್ಯ ವೃತ್ತಪರರು ಸಹಕರಿಸಬೇಕು.ಕುಟುಂಬಗಳು ಮತ್ತು ಸಮುದಾಯಗಳಿಂದ ಸಮಗ್ರ ಬೆಂಬಲದ ಅಗತ್ಯವನ್ನು ಒತ್ತಿಹೇಳುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದಾದ್ಯಂತ ಮೊದಲ 6 ತಿಂಗಳು ಸ್ತನ್ಯಪಾನ ಮಾಡಿಸುವವರ ಸಂಖ್ಯೆ ಬರಿ 44% ಆಗಿತ್ತು,ಭಾರತದಲ್ಲಿ NFHS-4 ಮತ್ತು NFHS-5 ರ ಪ್ರಕಾರ 31.3% ಮತ್ತು 43% ಇದೆ, ಪ್ರತಿವರ್ಷ ಈ ಕಾರ್ಯಕ್ರಮದಿಂದ ಸ್ತನ್ಯಪಾನ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ.ಹುಟ್ಟಿದ ಮೊದಲ 6 ತಿಂಗಳ ವರೆಗೆ ಬರಿ ತಾಯಿಯ ಎದೆ ಹಾಲು ಕುಡಿದಿರುವ ಮಕ್ಕಳಲ್ಲಿ ವಿಶ್ವದಾದ್ಯಂತ 12% ಶಿಶು ಮರಣವನ್ನು ತಡೆದಿದೆ.
ನವಜಾತ ಶಿಶುಗಳಿಗೆ ಎದೆಹಾಲು ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ.
- ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
- ಮೆದುಳಿನ ಬೆಳವಣಿಗೆಗೆ ಸಹಕರಿಸುತ್ತದೆ
- ಇದೊಂದು ಸಂಪೂರ್ಣ ಮತ್ತು ಸಮತೋಲಿತ ಆಹಾರ
- ಸುಲಭವಾಗಿ ಸಿಗುವ ಮತ್ತೆ ಜೀರ್ಣಿಸುವ ಆಹಾರ
- ಶಿಶು ಮರಣ ಪ್ರಮಾಣ ತಗ್ಗಿಸುತ್ತದೆ.(Decreases infant mortality rate)
- ಮಕ್ಕಳಲ್ಲಿ ಬೊಜ್ಜು ಸಂಬಂಧಿತ ರೋಗಗಳನ್ನು ತಡೆಗಟ್ಟುತದೆ.
- ಸ್ತನ ಕ್ಯಾನ್ಸರ್ ಹಾಗೂ ಅಂಡಾಶಯದ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.
- ತಾಯಿ ಮಗುವಿನ ಬಾಂಧವ್ಯ ಹೆಚ್ಚಿಸುತ್ತದೆ.
- ಗರ್ಭಧಾರಣೆಯನ್ನು ತಡೆಗಟ್ಟುತ್ತದೆ (Lactation ammenorrhea)
- ತಾಯಿಯ ತೂಕವನ್ನು ಇಳಿಸಲು ಸಹಕರಿಸುತ್ತದೆ.
ಎದೆ ಹಾಲು ಹೆರಿಗೆ ಆಗಿ 1 ಗಂಟೆಯ ಒಳಗೆ ಉಣಿಸಬೇಕು,ಹೆರಿಗೆಯ ನಂತರ ಮೊದಲ 2-3 ದಿನ ಬರುವ ಹಾಲು colostrum ಎಂದು ಕರೆಯಲಾಗುತ್ತದೆ,ಈ ಹಾಲು ತುಂಬಾ ಪ್ರಾಮುಖ್ಯವಾಗಿದ್ದು ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ,ಜಠರದ ಸೋಂಕುಗಳನ್ನು ತಡೆಯುತ್ತದೆ. ಹೆರಿಗೆ ಆದ ಮೇಲೆ ಮೊದಲ 6 ತಿಂಗಳ ವರೆಗೆ ಬರಿ ಎದೆ ಹಾಲು ಮಾತ್ರ ಕೊಡಬೇಕು ,ಶಿಶುವಿಗೆ 6 ತಿಂಗಳ ನಂತರ ಎದೆ ಹಾಲಿನ ಜೊತೆ ಪೂರಕ ಆಹಾರವನ್ನು(complementary feeds) ಶುರುಮಾಡಬೇಕು ,ಎದೆ ಹಾಲು 2 ವರ್ಷದ ವರೆಗೆ ಕುಡಿಸಿದರೆ ಮಗುವಿನ ಮೆದುಳು ಬೆಳವಣಿಗೆಗೆ ತುಂಬಾ ಉಪಯೋಗಕಾರಿ ಹಾಗೂ ಮತ್ತಿತರ ರೋಗಗಳಿಂದ ರಕ್ಷಿಸುತ್ತದೆ .
ಎದೆ ಹಾಲಿನ ಪ್ರಾಮುಖ್ಯತೆಯನ್ನು ತಿಳಿದಿರುವ ಕೆಲವು ಸಂಘಟನೆಗಳು ಹಾಲು ಸಂಗ್ರಹ ಕೇಂದ್ರ ( human milk bank) ಸ್ಥಾಪಿಸಿವೆ. ಈ ಕೇಂದ್ರ ಶಿಶುವಿಗೆ ಜೈವಿಕವಾಗಿ ಸಂಬಂಧವಿಲ್ಲದ ಶುಶ್ರೂಷಾ ತಾಯಂದಿರಿಂದ ದಾನ ಮಾಡುವ ಹಾಲನ್ನು ಸಂಗ್ರಹಿಸುವ, ಪರದೆಯ, ಪ್ರಕ್ರಿಯೆಗೊಳಿಸುವ, ಪಾಶ್ಚರೀಕರಿಸುವ ಮತ್ತು ವಿತರಿಸುವ ಸೇವೆ ಮಾಡುತ್ತವೆ. ಈ ಸೇವೆಯಿಂದ ಕಡಿಮೆ ಮತ್ತು ಅತಿ ಕಡಿಮೆ ಜನನ ತೂಕದ ಶಿಶುಗಳಿಗೆ ಹಾಗೂ ತಮ್ಮ ತಾಯಿಯ ಸ್ವಂತ ಹಾಲನ್ನು ನೀಡಲಾಗದ ಸಣ್ಣ ಮತ್ತು ಅನಾರೋಗ್ಯದ ನವಜಾತ ಶಿಶುಗಳಿಗೆ ತುಂಬಾ ಉಪಯೋಗವಾಗುತ್ತಿದೆ.
ಎದೆ ಹಾಲಿನ ಪ್ರಯೋಜನಗಳ ಬಗ್ಗೆ ಅರಿವಿದ್ದರೆ ನಿಮ್ಮ ಮಗುವಿಗೆ ಆರೋಗ್ಯಕರ ಜೀವನವನ್ನು ನೀಡಬಹುದು. ಸ್ತನ್ಯಪಾನ ಸಪ್ತಾಹವು ಸ್ತನ್ಯಪಾನ ಮಾಡುತ್ತಿರುವ ಮತ್ತು ತಾಯ್ತನದ ನಿರೀಕ್ಷೆಯಲ್ಲಿರು ಮಹಿಳೆಯರಿಗೆ ಸ್ತನ್ಯಪಾನ ಮಾಡುವುದರ ಮೂಲಕ ತಮ್ಮ ಮಕ್ಕಳಿಗೆ ಆರೋಗ್ಯಕರ ಆರಂಬವನ್ನು ನೀಡಲು ತಾವು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಆದ್ದರಿಂದ ಇದನ್ನು ಜವಾಬ್ದಾರಿಯಿಂದ ಹಂಚಿಕೊಳ್ಳೋಣ ಮತ್ತು ಆರೋಗ್ಯಕರ ಭವಿಷ್ಯಕ್ಕೆ ಅಡಿಪಾಯ ಹಾಕೋಣ.